ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೊಸ ವಿಐಪಿ ಎಂಟ್ರಿ: ಪ್ಯಾಲೇಸ್ ರಸ್ತೆಯಲ್ಲಿ 40 ನಿಮಿಷ ನಾಗರಾಜನ ದರ್ಬಾರ್! ವಿಡಿಯೋ ವೈರಲ್​.. Cobra In Bengaluru

Cobra In Bengaluru (ಚಿತ್ರ X)
Cobra In Bengaluru (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯ ಬಿಡುವಿಲ್ಲದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದು ಹೊಸದೇನಲ್ಲ
  • ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ವಾಹನ ಸವಾರರು ಎಂದಿನಂತೆ ಸಾಗುತ್ತಿದ್ದರು
  • ಬೆಂಗಳೂರಿನ ರಸ್ತೆಗಳಲ್ಲಿ ಜನಜಂಗುಳಿ ಮತ್ತು ವಾಹನಗಳ ಹಾರನ್ ಸದ್ದಿಗೆ ಪ್ರಾಣಿಗಳು ಹೆದರಿ ಓಡುತ್ತವೆ
ಬೆಂಗಳೂರು: ಸಿಲಿಕಾನ್ ಸಿಟಿಯ ಬಿಡುವಿಲ್ಲದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದು ಹೊಸದೇನಲ್ಲ. ಆದರೆ ನಿನ್ನೆ (ಜು.07) ಸಂಜೆ ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಲು ಕಾರಣ ಯಾವುದೇ (Cobra In Bengaluru) ಅಪಘಾತ ಅಥವಾ ವಿಐಪಿ ಕಾರುಗಳ ಮೆರವಣಿಗೆಯಲ್ಲ. ಬದಲಿಗೆ ರಸ್ತೆಯ ಮಧ್ಯದಲ್ಲೇ ರಾಜಗಾಂಭೀರ್ಯದಿಂದ ಪ್ರತ್ಯಕ್ಷನಾಗಿದ್ದ ಸುಮಾರು ಐದಾರು ಅಡಿ ಉದ್ದದ ನಾಗರಹಾವು.

ರಸ್ತೆಯ ಮಧ್ಯೆ ನಾಗರಾಜನ ಧ್ಯಾನ

ನಿನ್ನೆ ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ವಾಹನ ಸವಾರರು ಎಂದಿನಂತೆ ಪ್ಯಾಲೇಸ್ ರಸ್ತೆಯಲ್ಲಿ ಸಾಗುತ್ತಿದ್ದರು. ಹಠಾತ್ತನೆ ರಸ್ತೆಯ ಮಧ್ಯಭಾಗದಲ್ಲಿ ಏನೋ ಕದಲುತ್ತಿರುವುದನ್ನು ಗಮನಿಸಿದ ಮುಂಭಾಗದ ಸವಾರರು ಬ್ರೇಕ್ ಹಾಕಿದರು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಹೆಡೆ ಬಿಚ್ಚಿ ನಿಂತಿದ್ದ ನಾಗರಹಾವನ್ನು ಕಂಡು ಸವಾರರು ಒಂದು ಕ್ಷಣ ದಂಗಾದರು.
ಸಾಮಾನ್ಯವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಜನಜಂಗುಳಿ ಮತ್ತು ವಾಹನಗಳ ಹಾರನ್ ಸದ್ದಿಗೆ ಪ್ರಾಣಿಗಳು ಹೆದರಿ ಓಡುತ್ತವೆ. ಆದರೆ ಈ ಹಾವು ಮಾತ್ರ ಯಾವುದೇ ಭಯವಿಲ್ಲದೇ, ರಸ್ತೆಯನ್ನು ತನ್ನದೇ ಸಾಮ್ರಾಜ್ಯ ಎಂಬಂತೆ ಭಾವಿಸಿ ಸುಮಾರು 30-40 ನಿಮಿಷಗಳ ಕಾಲ ಅಲ್ಲಿಯೇ ಹೆಡೆ ಬಿಚ್ಚಿ ರಸ್ತೆಯ ಮಧ್ಯದಲ್ಲೇ ಕುಳಿತು ಬಿಟ್ಟಿತು. ಆದಾಗ್ಯೂ, ಸಂಚಾರ ನಿಯಮಗಳ ಯಾವುದೇ ಹಂಗಿಲ್ಲದೆ, ಧ್ಯಾನಕ್ಕೆ ಕುಳಿತಂತೆ ಕಾಣುತ್ತಿದ್ದ ಹಾವನ್ನು ನೋಡಿ ವಾಹನ ಸವಾರರು ಅದಕ್ಕೆ ತೊಂದೆರೆಯಾಗದಂತೆ ದೂರದಿಂದಲೇ ಚಲಿಸುತ್ತಿದ್ದರು.
ಈ ದೃಶ್ಯವನ್ನೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 30 ನಿಮಿಷಗಳ ಸಂಜೆ ಧ್ಯಾನ ಅವಧಿಗೆ ಹಾವು ರಸ್ತೆಯ ಮಧ್ಯಭಾಗ ಸೂಕ್ತ ಸ್ಥಳವೆಂದು ನಿರ್ಧರಿಸಿದಂತೆ ತೋರುತ್ತಿದೆ ಮತ್ತು ಸಂಚಾರ ನಿಯಮಗಳ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂಬ ಶೀರ್ಷಿಕೆಯನ್ನು ಹಂಚಿಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ವನ್ಯಜೀವಿ ರಕ್ಷಣಾ ಸಿಬ್ಬಂದಿ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದರು. ಹಾವಿನ ಮೇಲೆ ಯಾವುದೇ ವಾಹನಗಳು ಹತ್ತದಂತೆ ಎಚ್ಚರಿಕೆ ವಹಿಸಿದ ಅವರು, ಸವಾರರನ್ನು ನಿಯಂತ್ರಿಸಿ ರಸ್ತೆಯ ಒಂದು ಬದಿಯಿಂದ ಮಾತ್ರ ವಾಹನಗಳು ನಿಧಾನವಾಗಿ ಚಲಿಸುವಂತೆ ವ್ಯವಸ್ಥೆ ಮಾಡಿ ಕೊಟ್ಟರು. ಇದಾದ ಬಳಿಕ ನಾಗರಹಾವನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ ಬೆಂಗಳೂರು ಟ್ರಾಫಿಕ್‌ಗೆ ನಿನ್ನೆ ಹೊಸ ವಿಐಪಿ ಎಂಟ್ರಿ ಕೊಟ್ಟಿದ್ದಾರೆ. ಯಾವುದೇ ಬಿಎಂಡಬ್ಲ್ಯೂ ಕಾರು ಇಲ್ಲದೆಯೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸುವುದು ಹೇಗೆ ಎಂಬುದನ್ನು ಈ ನಾಗರಾಜ ತೋರಿಸಿಕೊಟ್ಟಿದ್ದಾನೆ. ನಗರದಲ್ಲಿ ಒಬ್ಬ ವಿಭಿನ್ನ ಟ್ರಾಫಿಕ್ ಕಂಟ್ರೋಲರ್ ಸಿಕ್ಕಿದ್ದಾನೆ ಎಂದು ಕಮೆಂಟ್​ ಮಾಟಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net