ಇಂದು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ವಿಜಯ್ ಭೇಟಿ, ದೇವಸ್ಥಾನದ ಮಹತ್ವವೇನು?...Kollur Mookambika Devi

Kolluru Mookambika Devi
Kolluru Mookambika Devi
Published on

ಪ್ರಮುಖ ಮುಖ್ಯಾಂಶಗಳು

  • ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ವಿಜಯ್​ ಭೇಟಿ
  • ಮಧ್ಯಾಹ್ನ 3ರಿಂದ 3:30ರವರೆಗೆ ದೇಗುಲಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ
  • ಉಡುಪಿಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯ
Kolluru Mookambika Devi:

ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆಯುವಾಗ ಮತ್ತು ದೇಗುಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಿಎಂ ವಿಜಯ್ ಅವರಿಗೆ ಝಡ್ ಪ್ಲಸ್ ಭದ್ರತೆ ವಹಿಸಿರುವ ಕಾರಣ ಸಾರ್ವಜನಿಕರು ಸಂಚರಿಸದಂತೆ ಎಚ್ಚರಿಜೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗರ ದೇಗುಲಕ್ಕೆ ಗುರುವಾರ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು

ಕೊಲ್ಲೂರು ಮೂಕಾಂಬಿಕಾ ದೇವಿಯ ಮಹತ್ವವೇನು? ಪುರಾಣದ ಕತೆಗಳು ದೇವಸ್ಥಾನದ ಬಗ್ಗೆ ಏನು ಹೇಳುತ್ತದೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಮೂಕಾಂಬಿಕಾ ದೇವಿಯ ಮಹತ್ವವೇನು

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಸುಮಾರು 1200 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಈ ಕ್ಷೇತ್ರವನ್ನು ಅನೇಕ ಸ್ಥಳೀಯ ರಾಜರು ಹಾಗೂ ಕೆಳದಿ ರಾಜವಂಶದ ಪ್ರಸಿದ್ಧ ರಾಜರಾದ ಶಂಕಣ್ಣ ನಾಯಕ ಮತ್ತು ಶಿವಪ್ಪ ನಾಯಕರು ಪೋಷಿಸಿ, ದೇವಾಲಯಕ್ಕ ದೇಣಿಗೆ ಕೊಟ್ಟು ನವೀಕರಣೆಗೆ ಸಹಾಯ ಮಾಡಿದ್ದರು. ಇನ್ನು 18 ನೇ ಶತಮಾನದಲ್ಲಿ ಮರಾಠರು ಈ ಪ್ರದೇಶದ ಮೇಲೆ ದಾಳಿ ಮಾಡಿದಾಗ, ದೇವಾಲಯದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ರತ್ನಗಳನ್ನು ಲೂಟಿ ಮಾಡಲಾಗಿತ್ತು ಎಂಬ ಇತಿಹಾಸವು ಇದೆ ಎನ್ನಲಾಗಿದೆ.

ಆದಿ ಶಂಕರಾಚಾರ್ಯರ ಬಗ್ಗೆಯೊಂದು ಕತೆ

ಮಹಾನ್ ತತ್ವಜ್ಞಾನಿ ಆದಿ ಶಂಕರಾಚಾರ್ಯರು ಸರಸ್ವತಿ ದೇವಿಯ ಪರಮ ಭಕ್ತರಾಗಿದ್ದರು. ಅವರ ಭಕ್ತಿಗೆ ಪ್ರಸನ್ನಳಾದ ದೇವಿಯು, ಶಂಕರಾಚಾರ್ಯರ ಇಚ್ಛೆಯಂತೆ ಕೇರಳಕ್ಕೆ ಬರಲು ಒಪ್ಪಿಕೊಂಡಳು. ಆದರೆ, "ನಾನು ನಿನ್ನನ್ನು ಹಿಂಬಾಲಿಸುವಾಗ ನೀನು ಎಲ್ಲೂ ತಿರುಗಿ ನೋಡಬಾರದು, ನೋಡಿದರೆ ಅಲ್ಲೇ ನೆಲೆನಿಲ್ಲುತ್ತೇನೆ" ಎಂಬ ಷರತ್ತನ್ನು ವಿಧಿಸಿದಳು. ದಾರಿಯಲ್ಲಿ ಕೊಲ್ಲೂರಿನ ಬಳಿ ಬಂದಾಗ ಶಂಕರರು ದೇವಿಯ ಗೆಜ್ಜೆ ಶಬ್ಧ ಕೇಳಿಸದ್ದನ್ನು ಗಮನಿಸಿ, ಹಿಂದೆ ತಿರುಗಿ ಬಿಟ್ಟರು. ಷರತ್ತು ಮುರಿದ ಕಾರಣ ದೇವಿ ಅಲ್ಲೇ ನೆಲೆ ನಿಂತಳು ಎನ್ನುವ ಪ್ರತೀತಿ ಇದೆ.

ಶಂಕರಾಚಾರ್ಯರ ಪ್ರಾರ್ಥನೆಗೆ ಒಲಿದ ದೇವಿ ಬೆಳಿಗ್ಗೆ ಕೇರಳದ ಚೊಟ್ಟಾನಿಕ್ಕಾರ ದೇವಸ್ಥಾನದಲ್ಲೂ, ಮಧ್ಯಾಹ್ನದ ವೇಳೆಗೆ ಕೊಲ್ಲೂರು ದೇವಸ್ಥಾನದಲ್ಲೂ ನೆಲೆಸುವುದಾಗಿ ತಿಳಿಸಿದಳು ಎನ್ನಲಾಗಿದೆ. ಆ ಮೂಲಕ ದೇವಿಯ ಪಂಚಲೋಹದ ವಿಗ್ರಹವನ್ನು 'ಶ್ರೀ ಚಕ್ರ ಯಂತ್ರ'ದ ಮೇಲೆ ಶಂಕರಾಚಾರ್ಯರು ಸ್ಥಾಪಿಸಿದರು ಎನ್ನುವ ನಂಬಿಕೆ ಇದೆ

ಕೌಮಾಸುರನ ಕತೆ

ಕೌಮಾಸುರ ರಾಕ್ಷಸನು ತನಗೆ ಅಜೇಯ ಶಕ್ತಿ ಸಿಗಬೇಕು ಎಂದು ತಪಸ್ಸು ಮಾಡುತ್ತಿದ್ದನು. ಈತನ ದುಷ್ಟ ಶಕ್ತಿಯನ್ನು ಅರಿತ ಪಾರ್ವತಿ ದೇವಿ ಆತನಿಗೆ ಮಾತು ಬರದಂತೆ ಮಾಡಿದಳು. ಅಂದಿನಿಂದ ಆತನನ್ನು ಮೂಕಾಸುರ ಎನ್ನಲಾಗುತ್ತದೆ. ಮೂಕನಾದರು ಜನಸಾಮಾನ್ಯರಿಗೆ ಸಮಸ್ಯೆ ಮಾಡುವುದನ್ನು ಬಿಡದ ಕಾರಣ ಶಕ್ತಿ ಸ್ವರೂಪಿಣಿಯಾಗಿ ಆತನ ಸಂಹಾರ ಮಾಡಿದ ಕಾರಣ ಮೂಕಾಂಬಿಕಾ ಎನ್ನುವ ಹೆಸರು ಬಂತು ಎನ್ನುವ ನಂಬಿಕೆ ಇದೆ.


ದೇಗುಲದಲ್ಲಿ ನಡೆಯುವ ವಿಶೇಷ ಪೂಜೆ

ದೇವಾಲಯದಲ್ಲಿ ಪ್ರತಿದಿನ ತ್ರಿಕಾಲ ಪೂಜೆಗಳು ನೆರವೇರುತ್ತವೆ. ಪ್ರತಿವರ್ಷ ಶರನ್ನವರಾತ್ರಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ಅದ್ಧೂರಿ ವಾರ್ಷಿಕ ಉತ್ಸವ ನಡೆಯುತ್ತದೆ. ಜೊತೆಗೆ ದೇವಿಯ ಜನ್ಮದಿನವಾದ ಮೂಲ ನಕ್ಷತ್ರದಂದು ಫಲ್ಗುಣ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಲಗ್ಗೆ ಇಡುತ್ತಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net