ರಾಜಕೀಯ ಯಾರಪ್ಪನ ಆಸ್ತಿಯಲ್ಲ ಏನಾಗುತ್ತೋ ಆಗಲಿ: ಸಿಎಂ ಸಿದ್ದರಾಮಯ್ಯ ಪರೋಕ್ಷ ಸೆಡ್ಡು! CM Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್​
  • ಡಿಕೆಶಿ ಮನೆಗೆ ಭೇಟಿ ನೀಡಿ ಬಂದ ಬೆನ್ನಲ್ಲೇ ಹೈಕಮಾಂಡ್‌ಗೆ ಸಂದೇಶ ರವಾನಿಸಿದ ಸಿಎಂ ಸಿದ್ದರಾಮಯ್ಯ
  • ರಾಜಕೀಯ ಯಾರಪ್ಪನ ಆಸ್ತಿಯಲ್ಲ, ಏನಾಗುತ್ತೋ ಆಗಲಿ ನೋಡೇಬಿಡೋಣ ಅಂದ್ರು ಸಿದ್ದು
  • ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿಸುವ ರೀತಿಯಲ್ಲೇ ದೊಡ್ಡ ಧ್ವನಿಯಲ್ಲಿ ಗುಡುಗಿದ ಸಿಎಂ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಪರಸ್ಪರ ಬ್ರೇಕ್​ಫಾಸ್ಟ್​ ಮೀಟಿಂಗ್​ ನಡೆದ ಬಳಿಕ​ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಕೊಂಚ ತಗ್ಗಿರುವಂತೆ ಕಂಡರು ಕೂಡ ತೆರೆಮರೆಯಲ್ಲಿ ಕುರ್ಚಿ ಕಸರತ್ತು ಜೋರಾಗಿಯೇ ನಡೆಯುತ್ತಿದೆ. 
ಶನಿವಾರವಷ್ಟೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಅವರನ್ನು ತಮ್ಮ ಮನೆಗೆ ಬ್ರೇಕ್​ಫಾಸ್ಟ್​ಗೆ ಆಹ್ವಾನಿಸಿದ್ದರು. ಇಂದು ಮುಖ್ಯಮಂತ್ರಿಗಳು, ಡಿಕೆಶಿ ಮನೆಗೆ ಭೇಟಿ ನೀಡಿ ಬಂದಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಕಾಂಗ್ರೆಸ್​ ಹೈಕಮಾಂಡ್‌ಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ರಾಜಕೀಯ ಯಾರಪ್ಪನ ಆಸ್ತಿಯಲ್ಲ, ಏನಾಗುತ್ತೋ ಆಗಲಿ ನೋಡೇಬಿಡೋಣ ಅನ್ನೋ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ. ಇಂದು ವಿಧಾನಸೌಧದ ಕೆಂಗಲ್ ಗೇಟ್ ಪ್ರವೇಶ ದ್ವಾರದ ಬಳಿ ಶಾಸಕ ಗೋಪಾಲಕೃಷ್ಣ ಜತೆ ಸಿದ್ದರಾಮಯ್ಯ ಅವರು ಅನೌಪಚಾರಿಕ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿಸುವ ರೀತಿಯಲ್ಲೇ ದೊಡ್ಡ ಧ್ವನಿಯಲ್ಲಿ ಮಾತನಾಡಿದರು. 
ಶಾಸಕ ಗೋಪಾಲಕೃಷ್ಣ ಜತೆ ಮುಖಾಮುಖಿ ಮಾತನಾಡುವಾಗ, ರಾಜಕೀಯ ಯಾರಿಗೂ ಶಾಶ್ವತವಲ್ಲ, ಅದೇನಾಗುತ್ತೆ ಆಗಲಿ, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ಅಲ್ಲದೆ, ರಾಜಕೀಯ ಏನು ನಮ್ಮಪ್ಪನ ಆಸ್ತಿ ಅಲ್ಲ, ನಾನೆಂದಿಗೂ ತುಂಬಾ ಯೋಚನೆ ಮಾಡಿದವನೇ ಅಲ್ಲ ಎಂದು ಖಡಕ್​ ಮಾತುಗಳನ್ನು ಆಡಿದರು. 
ಡಿ.ಕೆ. ಶಿವಕುಮಾರ್​ ಅವರ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮಾಡಿದ ದಿನವೇ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಹೈಕಮಾಂಡ್​ಗೆ ಖಡಕ್​ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ. ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಕಾಂಗ್ರೆಸ್​ ವಲಯದಲ್ಲಿ ಹೊಸ ರೀತಿ ಚರ್ಚೆ ಹುಟ್ಟು ಹಾಕುವುದರಲ್ಲಿ ಸಂಶಯವೇ ಇಲ್ಲ.
ಅಂದಹಾಗೆ, ರಾಜ್ಯ ರಾಜಕಾರಣ ಇದೀಗ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಸಿಎಂ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್​ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದರ ನಡುವೆ ಹೈಕಮಾಂಡ್​ ಸೂಚನೆಯಂತೆ ಸಿದ್ದು ಮತ್ತು ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಮಾಡಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 
ಆದರೆ, ಡಿಸೆಂಬರ್​ 8ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ವಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣದಿಂದ, ಉಭಯ ನಾಯಕರು ಒಟ್ಟಿಗೆ ಬ್ರೇಕ್​ಫಾಸ್ಟ್​ ಮಾಡುವ ಮೂಲಕ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ಪ್ರದರ್ಶಿಸಿದ್ದಾರೆ. ಆದರೆ, ತೆರೆಮರೆಯಲ್ಲಿ ಮಾತ್ರ ಕುರ್ಚಿ ಕದನ ನಡೆಯುತ್ತಲೇ ಇದೆ ಎಂಬ ಮಾತುಗಳಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net