ಪ್ರಧಾನಿ ಸಂವಾದಕ್ಕೆ ಸಿಎಂ ಸಿದ್ದರಾಮಯ್ಯ ಗೈರು.. ಕಾಂಗ್ರೆಸ್​ನ ಯೋಗ್ಯತೆ ಸಾಬೀತಾಗಿದೆ ಎಂದು ವಿಜಯೇಂದ್ರ ಕಿಡಿ! | B Y Vijayendra

B Y Vijayendra | ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
B Y Vijayendra | ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
Published on
ಬೆಂಗಳೂರು: ಯುದ್ಧದಂತಹ ಅತ್ಯಂತ ಕಠಿಣ ಮತ್ತು ತುರ್ತು ಸಂದರ್ಭದಲ್ಲಿ ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಹಮ್ಮಿಕೊಂಡಿದ್ದ ಮಹತ್ವದ ವಿಡಿಯೋ ಸಂವಾದದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರ ಉಳಿದಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವಿಷಯವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮುಖ್ಯಮಂತ್ರಿಗಳು ಪ್ರಧಾನಿಗಳ ಜೊತೆಗಿನ ಸಭೆಯಿಂದ ದೂರ ಉಳಿಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿ.ವೈ.ವಿಜಯೇಂದ್ರ ಪೋಸ್ಟ್

ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಯುದ್ಧದ ಸಂದರ್ಭದಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ವಿಡಿಯೋ ಸಂವಾದ ಏರ್ಪಡಿಸಿದ್ದು, ಸಂಕಷ್ಟದ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಮಹತ್ವದ ಸಂವಾದದಿಂದ ದೂರ ಉಳಿದು ಕರ್ನಾಟಕದ ಜನತೆಗೆ ದ್ರೋಹ ಬಗೆದಿದ್ದಾರೆ ಎನ್ನದೇ ವಿಧಿಯಿಲ್ಲ.
ವಿಧಾನಮಂಡಲದಲ್ಲಿ ಭಾಷಣ ಮಾಡುವ ವೇಳೆ ಹಾಗೂ ಮಾಧ್ಯಮಗಳ ಮುಂದೆ ಕೇಂದ್ರ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಟೀಕೆ ಮಾಡುವ ಮುಖ್ಯಮಂತ್ರಿಗಳು ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಪ್ರಧಾನಿಗಳ ಜತೆ ಸಂವಾದದಲ್ಲಿ ಭಾಗಿ ಆಗಬೇಕಿತ್ತು. ಯುದ್ಧದ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ತೊಂದರೆ ಆಗದಂತೆ ಯಾವ ರೀತಿ ಕ್ರಮ ಅನುಸರಿಸಬಹುದು ಎಂಬ ಸಲಹೆಗಳನ್ನೂ ನೀಡಬಹುದಿತ್ತು. ಅಲ್ಲದೇ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಪೂಕರವಾಗಿ ರಾಜ್ಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವಿಷಯದ ಕುರಿತು ಚರ್ಚೆ ಮಾಡಬಹುದಿತ್ತು.
ಆದರೆ ಉತ್ತರಕುಮಾರನ ಪೌರುಷ ತೋರುವ ಮುಖ್ಯಮಂತ್ರಿಗಳು ಪ್ರಧಾನಿಗಳ ಜತೆ ಮುಖಾಮುಖಿ ಆಗದೇ ಸಂವಾದದಿಂದ ದೂರ ಉಳಿದಿರುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಯೋಗ್ಯತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು 7 ಕೋಟಿ ಕನ್ನಡಿಗರ ಪ್ರತಿನಿಧಿ ಎಂಬುದನ್ನು ಮರೆತು ಕೇವಲ ಕಾಂಗ್ರೆಸ್​ ಕಚೇರಿ, ಸರಕಾರಿ ಬಂಗಲೆಗೆ ಸೀಮಿತ ಆಗಿರುವುದು ಕನ್ನಡಿಗರ ದುರಾದೃಷ್ಟ ಎಂದು ಬರೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net