ಬೆಂಗಳೂರು: ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ತೀರ್ಮಾನವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಪ್ರಧಾನಮಂತ್ರಿಗಳ ಭೇಟಿ ಸಾಧ್ಯವಾದರೆ ಈ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಕಾಸಸೌಧದ ಸಭಾಂಗಣದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ (SCSP/TSP) ಕಾರ್ಯಕ್ರಮಗಳ 2026-27ನೇ ಸಾಲಿನ ಕ್ರಿಯಾ ಯೋಜನೆ ಕುರಿತಾದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಇಂದು ಬೆಳಗ್ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶಾಸಕರು, ಸಚಿವರು, ವಿವಿಧ ನಿಗಮಗಳ ಅಧ್ಯಕ್ಷರನ್ನು ಒಳಗೊಂಡಂತೆ ಸಭೆ ನಡೆಸಿದ್ದು, ನಂತರ ಪರಿಷತ್ತಿನ ಸಭೆ ನಡೆಸಿದ್ದೇನೆ. ಬೆಳಗಿನ ಸಭೆಯಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ವಿಚಾರವಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ನಮ್ಮ ಅರ್ಜಿ ಸ್ವೀಕೃತಗೊಂಡಿದೆ. ಈ ಕಾನೂನು ಹೋರಾಟದಲ್ಲಿ ಯಾರು ರಾಜ್ಯದ ಪರವಾಗಿ ವಾದ ಮಾಡಬೇಕು ಹಾಗೂ ಈ ಪ್ರಕರಣದ ಮೇಲ್ವಿಚಾರಣೆಗೆ ಡಿಸಿಎಂ ಪರಮೇಶ್ವರ್, ಮುನಿಯಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದರು.
ಈ ವಿಚಾರದಲ್ಲಿ ಹಿಂದೆ ಇದ್ದವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಬೇರೆ ಕೆಲವು ರಾಜ್ಯಗಳಲ್ಲಿ ಈ ಬಗ್ಗೆ ತೀರ್ಮಾನವಾಗಿದ್ದು, ತಮಿಳುನಾಡಿನಲ್ಲಿ ಶೇ. 69ರಷ್ಟು ಮೀಸಲಾತಿ ಇದೆ. ಶೇ. 50ರಷ್ಟು ಮೀಸಲಾತಿಗಿಂತ ನಾವು ಕೇವಲ ಶೇ. 6ರಷ್ಟು ವಿಸ್ತರಣೆಗೆ ಮನವಿ ಮಾಡುತ್ತಿದ್ದೇವೆ. ನಾವು ಈಗಾಗಲೇ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಿದ್ದು, ಮುಂದಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಈ ಸಮುದಾಯಗಳ ನಾಯಕರೊಂದಿಗೆ ಚರ್ಚಿಸಲಾಗಿದೆ. ಈ ವರ್ಗದ ಕಲ್ಯಾಣಕ್ಕೆ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ತೀರ್ಮಾನಿಸಲು ವಿಷನ್ ಗ್ರೂಪ್ ಅನ್ನು ರಚಿಸುತ್ತೇನೆ ಎಂದು ಸಿಎಂ ತಿಳಿಸಿದರು.
ಈ ವಿಚಾರಗಳ ಬಗ್ಗೆ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಕೆಲವು ಯೋಜನೆಗಳು ಪುನರಾವರ್ತನೆ (Overlapping) ಆಗುತ್ತಿರುವ ಬಗ್ಗೆ ನಮ್ಮ ನಾಯಕರು ಗಮನಸೆಳೆದಿದ್ದಾರೆ. ಇಷ್ಟು ವರ್ಷಗಳ ಕಾಲ ಎಸ್ಸಿಎಸ್ಪಿ/ಟಿಎಸ್ಪಿ ಮೂಲಕ ನೀಡಿರುವ ಅನುದಾನ ಯಾವ ರೀತಿ ಪರಿಣಾಮ ಬೀರಿದೆ ಎಂದು ಅಧ್ಯಯನ ಮಾಡಲು ಪ್ರತಿಷ್ಠಿತ ಸಂಸ್ಥೆಗಳಿಂದ ಸಾಮಾಜಿಕ ಆಡಿಟ್ (Social Audit) ಮಾಡಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸಿಎಸ್ಪಿ/ಟಿಎಸ್ಪಿ ಮೂಲಕ 2025-26ನೇ ಸಾಲಿನಲ್ಲಿ 42,503 ಕೋಟಿ ರೂ ಪ್ರಸಕ್ತ ಸಾಲಿನ 44,631 ಕೋಟಿ ರೂಪಾಯಿಯನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ನಮ್ಮ ಶಾಸಕರು ಹಾಗೂ ಸಚಿವರು ಹೊಸ ಆಲೋಚನೆ, ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಸೇರಿದಂತೆ ನಮ್ಮ ಎಸ್ಸಿ, ಎಸ್ಟಿ ಶಾಸಕರು ಎರಡು ದಿನಗಳ ಕಾಲ ಚರ್ಚೆ ನಡೆಸಿ, ಏನಾದರೂ ಬದಲಾವಣೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಆರ್ಥಿಕ ಇಲಾಖೆ ಜತೆಗೂಡಿ ಚರ್ಚಿಸಿ ನಮಗೆ ವರದಿ ನೀಡಲಿದ್ದಾರೆ ಎಂದರು.
ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯ 44,631 ಕೋಟಿ ರೂ ಅನುದಾನ ಅರ್ಹರಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆಯಾಗಿದ್ದು, ಇದಕ್ಕೆ ನಾವು ಬದ್ಧವಾಗಿದ್ದೇವೆ. 2001ರಿಂದ 2025ರವರೆಗೆ 19,115 ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಇದ್ದು, 17,793 ಹುದ್ದೆಗಳು ಭರ್ತಿಯಾಗಿವೆ. ಉಳಿದ 1,574 ಹುದ್ದೆಗಳು ಬಾಕಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ," ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಲು ಸರ್ಕಾರ ತೀರ್ಮಾನಿಸಿದ್ದು, ನಮ್ಮ ನಾಯಕರು ಚರ್ಚಿಸಿ ಈ ಕಾರ್ಯಕ್ರಮ ಎಲ್ಲಿ ನಡೆಯಬೇಕು ಎಂಬುದರ ಬಗ್ಗೆ ತೀರ್ಮಾನಿಸಲಿದ್ದಾರೆ. ಇದು ಐಕ್ಯತಾ ಸಮಾವೇಶವಾಗಿದ್ದು, ನಾವು ಚುನಾವಣೆಗೂ ಮುನ್ನ ಏನು ಮಾತು ನೀಡಿದ್ದೆವು, ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ ಎಂದರು.
ಹಾಸ್ಟೆಲ್ ಹಾಗೂ ಶಾಲಾ ಸಮವಸ್ತ್ರಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇವೆ. ಮುಂದಿನ ವರ್ಷದಿಂದ ಇವುಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳ ರೀತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳೂ ಉತ್ತಮವಾದ ಸಮವಸ್ತ್ರವನ್ನು ಧರಿಸಲಿ. ಅದಕ್ಕೆ ಸ್ವಲ್ಪ ಹೆಚ್ಚಿನ ಹಣ ಬೇಕಾದರೆ ನೀಡೋಣ. ಸದ್ಯದಲ್ಲೇ ಅಲ್ಪಸಂಖ್ಯಾತ ಶಾಸಕರು ಹಾಗೂ ಸಚಿವರ ಸಭೆ ಕರೆದು ಚರ್ಚೆ ಮಾಡಲಿದ್ದು, ಅದೇ ರೀತಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರ ಜತೆಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು. ಅಧಿವೇಶನಕ್ಕೂ ಮುಂಚಿತವಾಗಿಯೇ ಈ ಚರ್ಚೆ ನಡೆಯಲಿದೆ," ಎಂದು ತಿಳಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳಡಿ 2025-26ನೇ ಸಾಲಿನಲ್ಲಿ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿರುವ 1,937 ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.
ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ, ರಾಜ್ಯದ ಪಾಲನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿದ್ದರೂ, ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
2025-26ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ಎಸ್ಸಿಎಸ್ಪಿ/ಟಿಎಸ್ಪಿಯಲ್ಲಿ ಒಟ್ಟು 10,011 ಕೋಟಿ ರೂ ಹಂಚಿಕೆಯಾಗಿದ್ದು, ಕೇಂದ್ರದ ಪಾಲು 3,497 ಕೋಟಿ ರೂ ಹಾಗೂ ರಾಜ್ಯದ ಪಾಲು 6,514 ಕೋಟಿ ರೂ ಇದೆ. ಕೇಂದ್ರದ ಪಾಲಿನಲ್ಲಿ ಕೇವಲ 1,560 ಕೋಟಿ ರೂ ಬಿಡುಗಡೆಯಾಗಿದ್ದು, 1,937 ಕೋಟಿ ರೂ ಬಾಕಿ ಇದೆ.
ಬಿಡುಗಡೆಯಾಗಿರುವ ಕೇಂದ್ರದ ಅನುದಾನದಲ್ಲಿ ₹1,541 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ ಪಾಲಿನಲ್ಲಿ 5,628 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, 5,611 ಕೋಟಿ ರೂ ವೆಚ್ಚ ಮಾಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿಖರ ಸಂಖ್ಯೆಗೆ ಅನುಗುಣವಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇ-ಆಡಳಿತ ಇಲಾಖೆಯಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಫಲಾನುಭವಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿವಿಧ ಸಾಮಾನ್ಯ ಯೋಜನೆಗಳಿಗೆ ಎಸ್ಸಿಎಸ್ಪಿ/ಟಿಎಸ್ಪಿ ಅಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಅನುದಾನವನ್ನು ಫಲಾನುಭವಿಗಳ ವಾಸ್ತವಿಕ ಸಂಖ್ಯೆ ಆಧರಿಸಿ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನುದಾನ ಹಂಚಿಕೆಯಾಗುವಂತೆ ಖಾತ್ರಿಪಡಿಸಬೇಕು.
ಪ್ರತಿಯೊಬ್ಬ ಫಲಾನುಭವಿಯ ಛಾಯಾಚಿತ್ರ ಸೇರಿದಂತೆ ಸಂಪೂರ್ಣ ವಿವರ ವೆಬ್ಸೈಟ್ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ದೊರೆಯಬೇಕು.
ಫಲಾನುಭವಿಗಳ ಫೋಟೋ ಹಾಗೂ ವಿಡಿಯೋ ದಾಖಲಾಗಬೇಕು. ಆ ಮೂಲಕ ಪಾರದರ್ಶಕತೆ ತಂದು ಯಾವುದೇ ಕಾರಣಕ್ಕೂ ಯೋಜನೆಗಳ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅಡಿ ನಿಗದಿಪಡಿಸಲಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ಕಚೇರಿ ವೆಚ್ಚಕ್ಕಾಗಿ ಬಳಸಬಾರದು.
2025-26ನೇ ಸಾಲಿನಲ್ಲಿ ಎಸ್ಸಿಎಸ್ಪಿ ಅಡಿ 28,699 ಕೋಟಿ ರೂ ಬಿಡುಗಡೆಯಾಗಿದ್ದು, 28,630 ಕೋಟಿ ರೂ ವೆಚ್ಚವಾಗಿದೆ. ಟಿಎಸ್ಪಿ ಅಡಿ 10,962 ಕೋಟಿ ರೂ ಬಿಡುಗಡೆಯಾಗಿದ್ದು, 10,926.94 ಕೋಟಿ ರೂ ವೆಚ್ಚವಾಗಿದೆ. ಒಟ್ಟಾರೆ 39,661.99 ಕೋಟಿ ರೂ ಬಿಡುಗಡೆಯಾಗಿದ್ದು, 39,557.43 ಕೋಟಿ ರೂ ವೆಚ್ಚ ಅಂದರೆ ಶೇ. 99.74ರಷ್ಟು ಪ್ರಗತಿ ಸಾಧಿಸಲಾಗಿದೆ.
ಈ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 7,911 ಕೋಟಿ ರೂ, ಸಮಾಜ ಕಲ್ಯಾಣ ಇಲಾಖೆ 5,236 ಕೋಟಿ ರೂ, ಇಂಧನ ಇಲಾಖೆ 5,231 ಕೋಟಿ ರೂ, ಕಂದಾಯ ಇಲಾಖೆ 3,954 ಕೋಟಿ ರೂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2,403 ಕೋಟಿ ರೂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2,275 ಕೋಟಿ ರೂ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ 1,819 ಕೋಟಿ ರೂ, ಸಾರಿಗೆ ಇಲಾಖೆ 1,814 ಕೋಟಿ ರೂ ಹಾಗೂ ಶಾಲಾ ಶಿಕ್ಷಣ ಇಲಾಖೆ 1,202 ಕೋಟಿ ರೂ ವೆಚ್ಚ ಮಾಡಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.