ಮೀಸಲಾತಿ ವಿಚಾರ ಚರ್ಚೆಗೆ ಸಿಎಂ ಭೇಟಿ; ST ಶಾಸಕರೊಂದಿಗೆ ಸಭೆಗೆ ಸಿದ್ಧತೆ: ಸತೀಶ್ ಜಾರಕಿಹೊಳಿ

ST
ST
Published on
ಬೆಂಗಳೂರು: ST ಸಮುದಾಯಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಎಸ್‌ಟಿ ಸಮುದಾಯದ ಎಲ್ಲ ಶಾಸಕರೊಂದಿಗೆ ಸೇರಿ ಸಿಎಂ ಭೇಟಿಯಾಗಿ ಮೀಸಲಾತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ಎರಡು-ಮೂರು ಪ್ರಮುಖ ವಿಷಯಗಳಿವೆ. ಅದರಲ್ಲೂ ಮೀಸಲಾತಿ ವಿಚಾರ ಅತ್ಯಂತ ಮಹತ್ವದ್ದಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಇರುವ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಹಿರಿಯ ವಕೀಲರನ್ನು ನೇಮಕ ಮಾಡಬೇಕಾದ ಅಗತ್ಯವಿದೆ. ನ್ಯಾಯಾಲಯದ ಮೂಲಕವೇ ಮೀಸಲಾತಿ ಸಮಸ್ಯೆಗೆ ಪರಿಹಾರ ಸಿಗಬೇಕಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಇದರ ಜೊತೆಗೆ ಎಸ್‌ಟಿ ಸಮುದಾಯಕ್ಕೆ ಇನ್ನೂ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು. ಹಿಂದೆ ಎಸ್‌ಟಿ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳಿದ್ದವು. ಈಗಲೂ ಅದೇ ಪ್ರಮಾಣದ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಎಸ್‌ಟಿ ಸಮುದಾಯದ ಉಪಕುಲಪತಿ (ವಿಸಿ) ಹುದ್ದೆಯೂ ಖಾಲಿಯಿದೆ. ಆ ಸ್ಥಾನಕ್ಕೆ ಕೂಡಲೇ ನೇಮಕಾತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ತರಬೇತಿ ಉದ್ದೇಶಕ್ಕಾಗಿ ನಡೆಯುತ್ತಿರುವ ಸಭೆಯಾಗಿದೆ ಎಂದು ಸ್ಪಷ್ಟಪಡಿಸಿದರು.
"ಮತದಾನದ ವೇಳೆ ಯಾವುದೇ ತಪ್ಪು ಆಗಬಾರದು. ಶಾಸಕರು ಸರಿಯಾಗಿ ಮತ ಚಲಾಯಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಎರಡು ಅಥವಾ ಮೂರು ಮತಗಳು ತಪ್ಪಿದರೂ ಸಮಸ್ಯೆ ಉಂಟಾಗಬಹುದು. ಅದಕ್ಕಾಗಿ ತರಬೇತಿ ನೀಡಲಾಗುತ್ತಿದೆ" ಎಂದು ಹೇಳಿದರು.
ಪಕ್ಷದ ತಂತ್ರ ರೂಪಿಸುವ ಉದ್ದೇಶವೂ ಸಭೆಯ ಹಿಂದೆ ಇದೆ ಎಂದು ತಿಳಿಸಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು."ನಾವು ಶೇ.100ರಷ್ಟು ಗೆಲ್ಲುತ್ತೇವೆ. ನಮ್ಮ ಬಳಿ ಸಾಕಷ್ಟು ಮತಗಳಿವೆ. ಯಾವುದೇ ರೀತಿಯ ಸಮಸ್ಯೆ ಇಲ್ಲ" ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಮಳೆ ಕೊರತೆ ಮತ್ತು ವಿವಿಧ ಜಿಲ್ಲೆಗಳ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಾವು ಕೂಡ ಭಾಗಿಯಾಗುವುದಾಗಿ ತಿಳಿಸಿದರು. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಬೇಡಿಕೆಗಳಿದ್ದು, ಅವುಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ನೀತಿ ಆಯೋಗದ ಸಭೆಯಲ್ಲಿ ಈ ಬಾರಿ ಸಿಎಂ ಡಿ.ಕೆ. ಶಿವಕುಮಾರ್ ನೇರವಾಗಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ. ಹಿಂದೆ ಕೃಷ್ಣ ಬೈರೇಗೌಡ ಭಾಗವಹಿಸುತ್ತಿದ್ದರು. ಈಗ ರಾಜ್ಯದ ಪರವಾಗಿ ಇನ್ನಷ್ಟು ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಸಿಗಲಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net