ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ: ನರವಣೆ ಪುಸ್ತಕ ವಿವಾದದ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ CM ವಾಗ್ದಾಳಿ!

 CM Siddaramaih
CM Siddaramaih
Published on
ಬೆಂಗಳೂರು: "ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ಆತಂಕಕಾರಿ ಬೆಳವಣಿಗೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ಮಾಜಿ ಸೇನಾ ಮುಖ್ಯಸ್ಥರ ಪುಸ್ತಕ ಬಿಡುಗಡೆಗೆ ತಡೆ ನೀಡಿರುವ ವಿಚಾರವಾಗಿ ಅವರು ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆಯವರು ಬರೆದಿರುವ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (Four Stars of Destiny) ಪುಸ್ತಕದ ಬಿಡುಗಡೆಗೆ ಕೇಂದ್ರ ಸರ್ಕಾರ ತಡೆ ಒಡ್ಡಿರುವುದು ಈಗ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ. 2024ರಲ್ಲೇ ಈ ಪುಸ್ತಕ ಬಿಡುಗಡೆಯಾಗಬೇಕಿತ್ತು. ಇತ್ತೀಚೆಗೆ 'ಕಾರವಾನ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, 2020ರಲ್ಲಿ ಚೀನಾ ಗಡಿಯಲ್ಲಿ ಘರ್ಷಣೆ ನಡೆದಾಗ ಮೋದಿ ಸರ್ಕಾರ ದಿಟ್ಟ ನಿರ್ಧಾರ ತಗೆದುಕೊಳ್ಳುವಲ್ಲಿ ವಿಫಲವಾಗಿತ್ತು ಎನ್ನುವ ಗಂಭೀರ ಅಂಶಗಳು ಈ ಪುಸ್ತಕದಲ್ಲಿವೆ ಎಂದು ಹೇಳಲಾಗಿದೆ.
"ಜನರಲ್ ನರವಣೆಯವರು ಈ ಲೇಖನದ ವಿಚಾರಗಳನ್ನು ಸುಳ್ಳು ಎಂದು ಹೇಳಿಲ್ಲ, ಬದಲಿಗೆ ಪುಸ್ತಕ ಬಿಡುಗಡೆಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಸರ್ಕಾರದ ಈ ಮೌನವು ಸತ್ಯವನ್ನು ಹೂತುಹಾಕುವ ದುಷ್ಟ ಆಲೋಚನೆಯಾಗಿದೆ," ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ನಾಯಕತ್ವದ ಅಸಾಮರ್ಥ್ಯ

ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರದ ದ್ವಂದ್ವ ನಿಲುವಿನಿಂದಾಗಿ ಭಾರತೀಯ ಸೇನಾಪಡೆಗಳು ರಾಜಕೀಯ ಸಂದಿಗ್ಧತೆಗೆ ಸಿಲುಕಿದ್ದವು ಎಂಬ ಅಂಶವನ್ನು ಸಿದ್ದರಾಮಯ್ಯ ಎತ್ತಿ ತೋರಿಸಿದ್ದಾರೆ. ಇದು ಪ್ರಧಾನಿ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ರಾಜಕೀಯ ನಾಯಕತ್ವದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದಿದ್ದಾರೆ.

ರಾಹುಲ್ ಗಾಂಧಿ ಧ್ವನಿ ಹತ್ತಿಕ್ಕುವ ಯತ್ನ: ಸಿಎಂ ಖಂಡನೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸಂಸತ್ತಿನಲ್ಲಿ ಈ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಅವರಿಗೆ ಉತ್ತರ ನೀಡುವ ಬದಲು ಸತತ ಎರಡು ದಿನ ಸಂಸತ್ತನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, 8 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ.
"ರಾಹುಲ್ ಗಾಂಧಿ ದೇಶದ ಪರವಾಗಿ ಪ್ರಶ್ನೆ ಕೇಳಿದ್ದಾರೆಯೇ ಹೊರತು ಸೇನೆಯ ವಿರುದ್ಧವಲ್ಲ. ಚರ್ಚೆಗೆ ಅವಕಾಶ ನೀಡದೆ ಪಲಾಯನ ಮಾಡುತ್ತಿರುವುದು ಬಿಜೆಪಿಗೆ ಇರುವ ಭಯವನ್ನು ತೋರಿಸುತ್ತದೆ," ಎಂದು ಸಿಎಂ ಲೇವಡಿ ಮಾಡಿದ್ದಾರೆ.

ಬಿಜೆಪಿಯ 'ದೇಶ ಮೊದಲು' ಕೇವಲ ಬೊಗಳೆ!

ಬಿಜೆಪಿ ಮತ್ತು ಸಂಘಪರಿವಾರದ 'ದೇಶ ಮೊದಲು' ಎನ್ನುವ ಘೋಷಣೆಗಳು ಕೇವಲ ಬೊಗಳೆ ಭಾಷಣಗಳಾಗಿವೆ. ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸಿದ್ದರೆ ಸಂಸತ್ತಿನಲ್ಲಿ ಚರ್ಚೆ ಎದುರಿಸಲು ಭಯವೇಕೆ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಮೌನ ಮತ್ತು ಶರಣಾಗತಿಗಳೇ ಬಿಜೆಪಿ ನಾಯಕರ ನಿಜವಾದ ಗುಣ ಎಂದು ಕುಟುಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net