2028 ಚುನಾವಣೆ ಗೆಲ್ಲಬೇಕೆಂದು ಶಾಸಕರಿಗೆ ಟಾಸ್ಕ್ ನೀಡಿದ ಸಿಎಂ -ಜಿಲ್ಲಾವಾರು ಶಾಸಕರೊಂದಿಗೆ ಸತತ 7 ಗಂಟೆ ಮ್ಯಾರಥಾನ್ ಸಭೆ

DK SHIVAKUMAR
DK SHIVAKUMAR
Published on

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರು, ರಸ್ತೆ, ಸೇತುವೆ, ವಸತಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಒಕ್ಕೊರಲಿನಿಂದ ಶಾಸಕರುಗಳು ಮನವಿ
  • ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಿ ಅವುಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು

ಬೆಂಗಳೂರು:

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಜಿಬಿಎ ಚುನಾವಣೆಗಳು ಬರಲಿದ್ದು, ಅದಕ್ಕೆ ಈಗಿನಿಂದಲೇ ಸಜ್ಜಾಗಬೇಕು. 2028 ಚುನಾವಣೆಯಲ್ಲಿ ನೀವೆಲ್ಲರೂ ಮತ್ತೆ ಆಯ್ಕೆಯಾಗಿ ವಿಧಾನಸಭೆಗೆ ಬರಬೇಕು ಎಂದು ಟಾಸ್ಕ್ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಮ್ಮ ಜೊತೆಗೆ ನೀವಿರಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಶಾಸಕರುಗಳಿಗೆ ಅಭಯ ನೀಡಿದ್ದಾರೆ.
ಅಧಿವೇಶನ ಮುಗಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣದಲ್ಲಿ ಆಡಳಿತ ಪಕ್ಷದ ಶಾಸಕರೊಂದಿಗೆ ಸತತ ಏಳು ಗಂಟೆಗಳ ಕಾಲ ಮ್ಯಾರಥಾನ್ ಸಭೆ ನಡೆಸಿ, ಕ್ಷೇತ್ರಗಳ ಅಭಿವೃದ್ಧಿ, ಅನುದಾನ, ಸಂಘಟನೆ ಬಲವರ್ಧನೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
27 ಜಿಲ್ಲೆಗಳ ಶಾಸಕರು ಭಾಗವಹಿಸಿದ್ದ ಈ ಸಭೆಯಲ್ಲಿ ಕ್ಷೇತ್ರವಾರು ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು.
ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಒದಗಿಸುವ ಬಗ್ಗೆ ತೀರ್ಮಾನಿಸಲಾಗುವುದು. ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸಾಧ್ಯವಾದಷ್ಟು ಹೊಂದಾಣಿಕೆ ಮಾಡಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರಾಭಿವೃದ್ಧಿಗೆ ಅನುದಾನ ಕೊರತೆ:
ತಮ್ಮ ಕ್ಷೇತ್ರಗಳಲ್ಲಿನ ಕುಡಿಯುವ ನೀರು, ರಸ್ತೆ, ಸೇತುವೆ, ವಸತಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಒಕ್ಕೊರಲಿನಿಂದ ಶಾಸಕರುಗಳು ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಾಗುತ್ತಿರುವುದರಿಂದ ಕ್ಷೇತ್ರಾಭಿವೃದ್ಧಿಗೆ ಹಣದ ಕೊರತೆ ಎದುರಾಗಿದೆ ಎಂದು ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ್ ಜೋಡೋ ಯುವ ಸಂಘ:
ಸಭೆಯಲ್ಲಿ ಸಂಘಟನೆ ಬಲವರ್ಧನೆಗೂ ಮುಖ್ಯಮಂತ್ರಿ ವಿಶೇಷ ಒತ್ತು ನೀಡಿದರು. ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಿ ಅವುಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಶಾಸಕರಿಗೆ ಸೂಚಿಸಿದರು. ಸೂಕ್ತ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದ ಅವರು, ಇದು ಹಲವು ವರ್ಷಗಳ ಅಧ್ಯಯನದ ಫಲವಾಗಿದ್ದು, ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಸಮಿತಿ ರಚನೆ:
ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿಗಳಿಗೆ ಆರು ಸದಸ್ಯರನ್ನು ನೇಮಕ ಮಾಡುವ ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಿದರು. ಪಕ್ಷದ ಕಾರ್ಯಕರ್ತರ ರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಗೆ ಆದ್ಯತೆ ನೀಡುವಂತೆ ಸೂಚಿಸಿದ ಮುಖ್ಯಮಂತ್ರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಜಿಲ್ಲೆಗಳಲ್ಲಿ ಪಕ್ಷದ ಕಚೇರಿ ನಿರ್ಮಾಣ ಕಾರ್ಯ ಆರಂಭಿಸುವಂತೆ ನಿರ್ದೇಶನ ನೀಡಿದರು.
ಎಸ್‌ಐಆರ್ ಬಗ್ಗೆ ನಿಗಾ ವಹಿಸಿ:
ಸಭೆಯಲ್ಲಿ ವಿಶೇಷವಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಯಾರೊಬ್ಬರೂ ಹಕ್ಕಿನಿಂದ ವಂಚಿತರಾಗದಂತೆ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ವರ್ಗಾವಣೆಯಲ್ಲಿ ಹಸ್ತಕ್ಷೇಪ ಬೇಡ:
ಅಧಿಕಾರಿಗಳ ವರ್ಗಾವಣೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬಾರದು. ವರ್ಗಾವಣೆಯಲ್ಲಿ ಜಾತಿವಾದಕ್ಕೆ ಅವಕಾಶ ನೀಡದೆ ಸಾಮಾಜಿಕ ನ್ಯಾಯದ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಕ್ಷದ ವರಿಷ್ಠರ ಸೂಚನೆಯನ್ನು ಶಾಸಕರಿಗೆ ನೆನಪಿಸಿದರು.
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ಲಾನ್:
ಸರ್ಕಾರ ಮತ್ತು ಶಾಸಕರ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿಎಂ ಸಭೆ ಮಹತ್ವದ್ದಾಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಇದೇ ಮಾದರಿಯಲ್ಲಿ ಜಿಲ್ಲಾವಾರು ಶಾಸಕರ ಸಭೆಗಳನ್ನು ನಡೆಸಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಕರಾವಳಿ, ಮಲೆನಾಡು ಭಾಗಕ್ಕೆ ಆದ್ಯತೆ ಕೊಡಿ:
ವಿಶೇಷವಾಗಿ ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರು, ನಿರಂತರ ಮಳೆಯಿಂದಾಗಿ ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿರುವುದನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು. ರಸ್ತೆ ದುರಸ್ತಿ, ಸೇತುವೆಗಳ ಮರುನಿರ್ಮಾಣ ಹಾಗೂ ತುರ್ತು ಕಾಮಗಾರಿಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಶಾಸಕರಿಗೆ ಸಿಎಂ ಸಮನ್ವಯ ಪಾಠ:
ರಾಜ್ಯದ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳು,ಆದ್ಯತೆಯ ಯೋಜನೆಗಳು ಹಾಗೂ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಅಭಿವೃದ್ಧಿ ಕಾರ್ಯಗಳ ಕುರಿತು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಲಾಯಿತು. ಮಾತಿನುದ್ದಕ್ಕೂ ಸಿಎಂ ಸಮನ್ವಯತೆ ಪಾಠವನ್ನೆ ಬೋದಿಸಿದರು.
ಅನುದಾನ ಬಿಡುಗಡೆ ಬಗ್ಗೆ ಸಿಎಂ ಅಭಯ:
ಪಕ್ಷದ ಶಾಸಕರ ಹಿತ ಕಾಯಲು ಬದ್ದವಾಗಿದ್ದು, ಕ್ಷೇತ್ರಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಪಾರದರ್ಶಕವಾಗಿ ಸರ್ಕಾರ ಇರಲಿದೆ ಎಂಬ ಅಭಯವನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದರು. ಉಳಿದ ಎರಡು ವರ್ಷಗಳ ಅವಧಿಯಲ್ಲಿ ತುರ್ತು ಕಾಮಗಾರಿಗಳನ್ನ ಅಂತ್ಯಗೊಳಿಸಲು ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಮಾಡುವ ವಿಷಯವನ್ನ ಸಿಎಂ ಶಾಸಕರಿಗೆ ಮನವರಿಕೆ ಮಾಡಿದರು.
ಬರದ ವಿಚಾರದಲ್ಲಿ ಉದಾಸೀನ ಬೇಡ:
ರಾಜ್ಯದಲ್ಲಿ ಭೀಕರ ಬರವಿದ್ದು, ಜನ ಸಾಮಾನ್ಯರ ಪರವಾಗಿ ನಿಲ್ಲುವಂತೆ ಸಿಎಂ ಸೂಚನೆ ನೀಡಿದ್ದಾರೆ. ವಲಸೆ ತಪ್ಪಿಸುವ ಜೊತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ಎಚ್ಚರ ವಹಿಸುವಂತೆ ಸಿಎಂ ಪಕ್ಷದ ಶಾಸಕರಿಗೆ ಮನವರಿಕೆ ಮಾಡಿದ್ದಾರೆ. ಬರದಂತ ಸೂಕ್ಷ್ಮ ಸಂದರ್ಭದಲ್ಲಿ ಕ್ಷೇತ್ರದ ಜನರ ಪರ ನಿಲ್ಲುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ಆದ್ಯತೆ ಮೇಲೆ ಗಮನ ಹರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಚುನಾವಣೆ ಕಡೆಗೂ ಇರಲಿ ಗಮನ:
ಮೊದಲು ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ನಂತರ ಗ್ರೇಟರ್ ಬೆಂಗಳೂರು ಚುನಾವಣೆ ಹಾಗೂ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಈ ಬಗ್ಗೆ ಈಗಿನಿಂಗದೇ ವಿಶೇಷ ಗಮನ ಹರಿಸುವಂತೆ ಪಕ್ಷದ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ.
ವಿರೋಧ ಪಕ್ಷಗಳು ಪಿತೂರಿ:
ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳ ನಡವಳಿಕೆಯನ್ನ ಪ್ರಸ್ತಾಪಿಸಿದ ಸಿಎಂ, ಆಡಳಿತ ಪಕ್ಷದ ಮೇಲೆ ಸದಾ ಕತ್ತಿ ಮಸೆಯುವ ಕೆಲಸವನ್ನ ಮಾಡುತ್ತಿರುತ್ತಾರೆ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪಕ್ಷದ ಶಾಸಕರಿಗೆ ಎಚ್ಚರಿಕೆಯ ಪಾಠ ಮಾಡಿದರು. ವಿರೋಧ ಪಕ್ಷಗಳ ಷಡ್ಯಂತ್ರದ ಬಗ್ಗೆ ಸದಾ ಜಾಕರೂಕರಾಗಿರುವಂತೆ ಸೂಚಿಸಿದರು.
ಜಿಲ್ಲಾ ಸಚಿವರ ಜೊತೆ ಸಮನ್ವಯತೆ ಇರಲಿ:
ಜಿಲ್ಲಾ ಉಸ್ತ್ತುವಾರಿ ಸಚಿವರುಗಳು ಶಾಸಕರ ಮನವಿಯನ್ನ ಆಲಿಸಲಿದ್ದು, ಶಾಸಕರೂ ಅಗತ್ಯ ಸಹಕಾರ ನೀಡಬೇಕು. ತಮ್ಮ ಕ್ಷೇತ್ರಗಳ ಸಮಸ್ಯೆ ಇದ್ದರೆ ಸಚಿವರ ಗಮನಕ್ಕೆ ತರಬೇಕು, ಅಲ್ಲಿ ಕೆಲಸ ಆಗದಿದ್ದರೆ ಖುದ್ದು ನನ್ನ ಗಮನಕ್ಕೆ ತನ್ನಿ
ಎಂಎಲ್‌ಸಿಗಳ ಜೊತೆ ಸಭೆ:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಯಲಿದ್ದು, ನಂತರ ವಿಧಾನ ಪರಿಷತ್ ಸದಸ್ಯರೊಂದಿಗೂ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
*ಮುಖ್ಯಮಂತ್ರಿ ಜೊತೆಗಿನ ಸಭೆಗೆ 27 ಜಿಲ್ಲೆಗಳ ಬಹುತೇಕ ಶಾಸಕರು ಭಾಗಿಯಾಗಿ ಮನವಿ ಪತ್ರ ನೀಡಿದರು. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬೇಡಿಕೆ ಸಲ್ಲಿಸಿದ್ದು ವಿಶೇಷವಾಗಿತ್ತು. ಬುಧವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಶಾಸಕರ ಸಭೆಯ ಜೊತೆಗೆ ಪಕ್ಷದ 33 ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ ನಡೆಯಲಿದೆ

*ಸಿಎಂ ಜೊತೆಗೆ ಸಭೆ ನಡೆಯಬೇಕು ಎನ್ನುವುದು ಶಾಸಕರುಗಳ ಬೇಡಿಕೆಯಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿಯೂ ಹೀಗೆ ಸಭೆ ನಡೆಸಲಾಗಿತ್ತು. ಆಡಳಿತ ಪಕ್ಷದ ಶಾಸಕರುಗಳಿಗೆ ಆಯಾ ಸರ್ಕಾರಗಳು ಆದ್ಯತೆ ನೀಡಿಕೊಂಡು ಬಂದಿವೆ. ಅಭಿವೃದ್ಧಿ ಸಲುವಾಗಿ ಈ ಸಭೆ ಮಹತ್ವದ್ದಾಗಿದೆ. -ಡಾ.ಜಿ.ಪರಮೇಶ್ವರ್, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net