ಇಡೀ ಎಸ್‌ಐಆರ್ ಹಳ್ಳಹಿಡಿಯಲು ಸಿಎಂ ಡಿಕೆಶಿ ಸೂತ್ರಧಾರಿ!...ಅಕ್ರಮದ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ ಕುಮಾರಸ್ವಾಮಿ! | HD Kumaraswamy

 HD Kumaraswamy | ಎಸ್​ಐಆರ್​​ ಅಕ್ರಮದ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ ಕುಮಾರಸ್ವಾಮಿ!
HD Kumaraswamy | ಎಸ್​ಐಆರ್​​ ಅಕ್ರಮದ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ ಕುಮಾರಸ್ವಾಮಿ!
Published on
ಬೆಂಗಳೂರು: ರಾಜ್ಯ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಎಸಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಇಡೀ ಎಸ್‌ಐಆರ್ ಅಕ್ರಮದ ಮೂಲ ಸೂತ್ರಧಾರಿಯೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು ಎಂದು ದೂರಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಎಚ್​​ಡಿಕೆ, ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಶಾಮೀಲಾಗಿ ನಡೆಸುತ್ತಿದ್ದ ಅಕ್ರಮದ ವಿಡಿಯೋ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!

ಯಶವಂತಪುರ ಕ್ಷೇತ್ರದಲ್ಲಿ ಶಾಸಕರ ಸೂಚನೆ ಹಾಗೂ ಅವರೇ ಕೊಟ್ಟಿರುವ ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಅಧಿಕಾರಿಗಳು ಅಕ್ರಮವಾಗಿ ಎಸ್‌ಐಆರ್ ಮಾಡುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಈ ಕೃತ್ಯ ಎಸಗುತ್ತಿದ್ದ ಅಧಿಕಾರಿಯನ್ನು ನಮ್ಮ ಕಾರ್ಯಕರ್ತರು ಸ್ಥಳದಲ್ಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಗ ಆ ಅಧಿಕಾರಿ ನಮ್ಮವರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಮತ್ತೊಬ್ಬ ಅಧಿಕಾರಿ ಬಂದು ವಿಡಿಯೋ ಮಾಡಬೇಡಿ ಎಂದು ಗೋಗರೆದಿದ್ದಾರೆ. ಅಧಿಕಾರಿಗಳನ್ನು ಗುಲಾಮರಂತೆ ಹೆದರಿಸಿ ಬೆದರಿಸಿ ತನಗೆ ಬೇಕಾದ ಹಾಗೆ ಸರ್ಕಾರ ಎಸ್‌ಐಆರ್ ಮಾಡಿಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ!

ಡಿಕೆ ಶಿವಕುಮಾರ್​ ವಿರುದ್ಧ ಕಟು ಶೈಲಿಯಲ್ಲಿ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಸಿಎಂ ಮಹಾನ್ ಎನ್ನುವಂತೆ ಪಾಕಿಸ್ತಾನದ ಬಗ್ಗೆ, ಹುಂಡಿ ಕಳುವಿನ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಇವರದ್ದೇ ನೇತೃತ್ವದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಕಳುವಿನ ಬಗ್ಗೆ ಜಾಣಮೌನ ವಹಿಸಿದ್ದಾರೆ. ಇವರು ನೇರವಾಗಿ ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ. ಸಂವಿಧಾನ ಪುಸ್ತಕ ಹಿಡಿದು ದೊಡ್ಡ ದೊಡ್ಡ ಭಾಷಣ ಮಾಡುವ ಇವರೇ ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ. ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಮುಂತಾದ ಕ್ಷೇತ್ರಗಳಲ್ಲೂ ಇದೇ ಅಕ್ರಮ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧಕ್ಕೆ ನಮಸ್ಕಾರ ಮಾಡಿದ್ದು ಕೇವಲ ನಾಟಕ!

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸಂಸತ್ ಪ್ರವೇಶಿಸುವಾಗ ಮೆಟ್ಟಿಲುಗಳಿಗೆ ನಮಸ್ಕರಿಸಿದ ಮಾದರಿಯಲ್ಲಿ, ಈ ರಾಜ್ಯದ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವಾಗ ವಿಧಾನಸೌಧದ ಮೆಟ್ಟಿಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದರು. ಇದನ್ನು ನೋಡಿ ಈ ವ್ಯಕ್ತಿಯಲ್ಲಿ ಏನೋ ಬದಲಾವಣೆ ಇರಬಹುದು ಅಂದುಕೊಂಡಿದ್ದೆ. ಆದರೆ ಅದು ಕೇವಲ ನಾಟಕ ಎಂಬುದು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಇವರಿಗೆ ಕನಿಷ್ಠ ಮಾನ ಮರ್ಯಾದೆ ಇಲ್ಲ ಎಂದು ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹೊರಗಿನ ಅಧಿಕಾರಿಗಳನ್ನು ನಿಯೋಜಿಸಲು ಆಯೋಗಕ್ಕೆ ಒತ್ತಾಯ

ಯಶವಂತಪುರ ಶಾಸಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಜೆಡಿಎಸ್-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಇದ್ದಾಗ ರಾತ್ರೋರಾತ್ರಿ ಚೆನ್ನೈಗೆ ಕದ್ದು ಹೋಗಿ ಬಿಜೆಪಿ ಸೇರಿ ಮೂರು ವರ್ಷ ಮಂತ್ರಿಯಾಗಿದ್ದವರು ಈಗ ಕಾಂಗ್ರೆಸ್ ಕಡೆ ವಾಲಿದ್ದಾರೆ. ಈಗ ಅಧಿಕಾರಿಗಳು ಅವರ ಫೋಟೋ ಮುಂದಿಟ್ಟುಕೊಂಡು ಎಸ್‌ಐಆರ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಯ ಕನಿಷ್ಠ ಪರಿಜ್ಞಾನವೂ ಇಲ್ಲ. ಈ ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಈ ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇನ್ನು ಮುಂದೆ ನಡೆಯುವ ಎಸ್‌ಐಆರ್ ಪ್ರಕ್ರಿಯೆಯಿಂದ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು, ಹೊರಗಿನ ರಾಜ್ಯಗಳಿಂದ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಈ ಬಗ್ಗೆ ನಾನೇ ಖುದ್ದಾಗಿ ದೆಹಲಿಗೆ ತೆರಳಿ ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net