ಎಚ್.ಡಿ.ಕೋಟೆಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು

ಎಚ್.ಡಿ.ಕೋಟೆ ಪಟ್ಟಣದಲ್ಲಿ ಪೌರ ಕಾರ್ಮಿಕರು ಫುಟ್‌ಪಾತ್ ಅಂಗಡಿಗಳ ತೆರವು ಮಾಡುವ ಸಂದರ್ಭ ಬೀದಿ ಬದಿ ವ್ಯಾಪಾರಸ್ಥರು ತಡೆಯೊಡ್ಡಿರುವುದು.
ಎಚ್.ಡಿ.ಕೋಟೆ ಪಟ್ಟಣದಲ್ಲಿ ಪೌರ ಕಾರ್ಮಿಕರು ಫುಟ್‌ಪಾತ್ ಅಂಗಡಿಗಳ ತೆರವು ಮಾಡುವ ಸಂದರ್ಭ ಬೀದಿ ಬದಿ ವ್ಯಾಪಾರಸ್ಥರು ತಡೆಯೊಡ್ಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಫುಟ್‌ಪಾತ್ ಒತ್ತುವರಿ ತೆರವು
  • ಪುರಸಭಾ ಸಿಬ್ಬಂದಿ ಕಾರ್ಯ

ಎಚ್.ಡಿ.ಕೋಟೆ:

ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮಾಡುವ ಪುರಸಭಾ ಸಿಬ್ಬಂದಿ ಕಾರ್ಯಕ್ಕೆ ಶುಕ್ರವಾರ ಬೀದಿ ಬದಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರಲ್ಲದೆ, ಅಂಗಡಿ ತೆರವಿಗೆ ಅಡ್ಡಿಪಡಿಸಿದರು.

ಬೆಳ್ಳಂ ಬೆಳಗ್ಗೆಯೇ ಸಾರಿಗೆ ಬಸ್ ನಿಲ್ದಾಣದ ಮುಂಭಾಗವರುವ ಹಳೇ ಆಸ್ಪತ್ರೆ ಆವರಣದಲ್ಲಿ ಪುರಸಭೆಯ ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕರು ಜೆಸಿಬಿ ಯಂತ್ರದ ಮೂಲಕ ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಗುಂಪುಗೂಡಿದ ಬೀದಿ ಬದಿ ವ್ಯಾಪಾರಿಗಳು, ಇದಕ್ಕೆ ನಮ್ಮ ವಿರೋಧ ಇಲ್ಲ. ಮುಖ್ಯ ರಸ್ತೆಯ ಆಸುಪಾಸಿನಲ್ಲಿದ್ದ ಅಂಗಡಿಗಳನ್ನು ಈಗಾಗಲೇ ತೆರವು ಮಾಡಿದ್ದೀರ. ಯಾರಿಗೂ ತೊಂದೆಯಾಗದ ರೀತಿಯಲ್ಲಿ ಖಾಲಿ ಜಾಗದಲ್ಲಿ ತಳ್ಳು ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿರುವ ಜಾಗಕ್ಕೆ ಬಂದು ಇಲ್ಲಿಂದಲೂ ಕೂಡ ನಮ್ಮ ಹೊರ ಹಾಕಿದರೆ ನಾವು ಜೀವನ ನಡೆಸುವುದು ಹೇಗೆ. ಹಾಗಾಗಿ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೀದಿ ಬದಿ ಹೂವಿನ ವ್ಯಾಪಾರಿ ಮಹದೇವಮ್ಮ ಮಾತನಾಡಿ, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವುದೇ ಕಷ್ಟ ಇರುವ ಪರಿಸ್ಥಿತಿಯಲ್ಲಿ ಅಲ್ಲಿಂದ ಇಲ್ಲಿಗೆ.. ಇಲ್ಲಿಂದ ಅಲ್ಲಿಗೆ.. ಹೀಗೆ ನಮ್ಮ ಅಂಗಡಿಗಳನ್ನು ಬದಲಾವಣೆ ಮಾಡುತ್ತಿದ್ದು, ಇದರಿಂದ ನಾವು ಬದುಕು ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಪುರಸಭಾ ಜಾಗದಲ್ಲಿ ಅಕ್ರಮವಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿಕೊಂಡಿದ್ದಾರೆ. ಅವರನ್ನು ಖಾಲಿ ಮಾಡಿಸಲು ಪುರಸಭಾ ಅಧಿಕಾರಿಗಳಿಗೆ ಆಗಿಲ್ಲ. ಆದರೆ ಬಡವರಿಗೆ ತೊಂದರೆ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಉಳ್ಳವರಿಂದ ಹಣ ಪಡೆದು ಅವರಿಗೆ ರಕ್ಷಣೆ ನೀಡಿ ಬಡವರಿಗೆ ತೊಂದರೆ ಕೊಡುವ ಕೆಲಸವನ್ನು ಪುರಸಭಾ ಮುಖ್ಯಾಧಿಕಾರಿ ಮಾಡುತ್ತಿದ್ದಾರೆ ಎಂದು ದೂರಿದರು.
ನಂತರ ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್ ಭೇಟಿ ನೀಡಿ, ಮೂರು ದಿನದಲ್ಲಿ ಪುರಸಭೆಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ಜಾಗ ನೀಡಿ ಅಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಫುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವು ಮಾಡುತ್ತಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಂತಿಮವಾಗಿ ತೆರವು ಕಾರ್ಯ ನಡೆಯಿತು.
ಸ್ಥಳೀಯರಾದ ಮಾದೇವಮ್ಮ, ಮಂಜಮ್ಮ, ರೇಣಕಮ್ಮ, ಚೆನ್ನಾಜಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net