ಚಿತ್ತಾಪುರ: ತೀವ್ರ ವಿವಾದ, ರಾಷ್ಟ್ರ ಮಟ್ಟದಲ್ಲಿ ಚರ್ಚೆಗೀಡಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನವೂ ಚಿತ್ತಾಪುರದಲ್ಲಿ ಸಹಸ್ರಾರು ಸಂಘ ಹಿತೈಷಿಗಳು, ನೂರಾರು ಗಣವೇಷಧಾರಿಗಳ ನೇತೃತ್ವದಲ್ಲಿ ಅದ್ಧೂರಿಯಾಗಿ, ಸಂಭ್ರಮದಿಂದ ನೆರವೇರಿತು.
ಭಾನುವಾರ ಮಧ್ಯಾಹ್ನ 3 45ಕ್ಕೆ ಆರಂಭವಾದ ಪಥಸಂಚಲನಕ್ಕೆ ಸಾವಿರಾರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಸಾಗಿತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಭದ್ರಕೋಟೆ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ತನ್ನ ಸಂಘ ಶಕ್ತಿ ಪ್ರದರ್ಶಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲ ಮಧ್ಯೆ ಸಂಚಲನ ಯಶಸ್ವಿಯಾಗಿ ನೆರವೇರಿತು.
ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ದ ಅನುಮತಿ ನೀಡಿದ್ದು, ಸುಮಾರು 300ಕ್ಕೂ ಹೆಚ್ಚು ಗಣವೇಷಧಾರಿಗಳು ಹಾಗೂ ೫೦ ಘೋಷವಾದಕರು ಭಾಗವಹಿಸಿದ್ದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಪಥ ಸಂಚಲನ ವೀಕ್ಷಿಸಲು ಚಿತ್ತಾಪುರದ ರಸ್ತೆಗಳ ಇಕ್ಕೆಲುಗಳಲ್ಲಿ ಸಹಸ್ರಾರು ಸಾರ್ವಜನಿಕರು ಪುಷ್ಪವೃಷ್ಟಿಗೈದು, ಸ್ವಾಗತಿಸಿದರು. ಯುವಕರು, ಜನರು ಭಾರತ ಮಾತಾಕೀ ಜೈ ಘೋಷಣೆ ಮೊಳಗಿಸಿದರು.
ಬಿಗಿ ಭದ್ರತಾ ಕ್ರಮಗಳು ಮತ್ತು ಹೈಕೋರ್ಟ್‌ನ ಷರತ್ತುಗಳ ನಡುವೆಯೂ ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತು.