ಭದ್ರೆತೆಗೆ 1200 ಪೊಲೀಸ್, 52 ಸಿಸಿ ಕ್ಯಾಮೆರಾ, 4 ಡ್ರೋನ್ ನಿಗಾ
ಕಲಬುರಗಿ:ತೀವ್ರ ವಿವಾದ, ಗೊಂದಲ ಮೂಡಿಸಿದ್ದ ಚಿತ್ತಾಪುರದ ಆರೆಸ್ಸೆಸ್ ಪಥಸಂಚಲನಕ್ಕೆ ಜಿಲ್ಲಾಡಳಿತದ ಆದೇಶದಂತೆ ಹೈಕೋರ್ಟ್ ಅನುಮತಿ ನೀಡಿದಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಭಾನುವಾರ ಸಂಘದ ಸಂಚಲನ ನಡೆಯಲಿದೆ.
ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ (ಆರೆಸ್ಸೆಸ್) ಸಂಘದ ಶಂಖನಾದ ಮೊಳಗಲಿದ್ದು, 350 ಸ್ವಯಂಸೇವಕರ ಪಥಸಂಚಲನ ನಿರ್ವಹಣೆಗೆ 1200 ಪೊಲೀಸರನ್ನು ನಿಯೋಜಿಸಲಾಗಿದೆ.
ನಿಗದಿತ ಮಧ್ಯಾಹ್ನ 3ಗಂಟೆಗೆ ಪಥಸಂಚಲನ ಆರಂಭವಾಗಿ, 5.30ಕ್ಕೆ ಎಲ್ಲ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಪಥಸಂಚಲನ ನಿಮಿತ್ತ ಇಡೀ ಚಿತ್ತಾಪುರ ಪಟ್ಟಣವನ್ನು ಕೇಸರಿ ಧ್ವಜಗಳಿಂದ ಸಿಂಗರಿಸಿದ್ದು, ಸ್ವಾಗತದ ಬ್ಯಾನರ್ ಗಳನ್ನು ಅಳವಡಿಸಲಾಗಿದೆ.
ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಚಿತ್ತಾಪುರ ಕಂದಾಯ ತಾಲೂಕು ಹೊರತುಪಡಿಸಿ, ಬೇರೆ ತಾಲೂಕಿನವರಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ, ಪಟ್ಟಣ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಿಯೇ ಒಳಬಿಡಲಾಗುತ್ತಿದೆ.
ಸಂಘದ ಶತಮಾನೋತ್ಸವ, ವಿಜಯದಶಮಿ ಉತ್ಸವದ ಅಂಗವಾಗಿ ಕಳೆದ ಅ.೧೯ರಂದು ನಡೆಸಬೇಕೆಂದಿದ್ದ ಪಥಸಂಚಲನಕ್ಕೆ ಸ್ಥಳೀಯ ತಾಲೂಕಾಡಳಿತ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂಬ ಕಾರಣ ಹೇಳಿ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಸಂಘದ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಹೈಕೋರ್ಟ್ ಮೊರೆ ಹೋಗಿದ್ದರು.
ಅಂದಿನಿಂದ ಇಂದಿನವರೆಗಿನ ಒಂದು ತಿಂಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಜಿಲ್ಲಾಡಳಿತ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ ಆದೇಶಿಸಿದ್ದು, ಅದರಂತೆ ಚಿತ್ತಾಪುರ ಪಟ್ಟಣದಲ್ಲಿಂದು ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಲಿದೆ.
ಹೈಕೋರ್ಟ್ ನಿರ್ದೇಶನದಂತೆ ೩೦೦ ಜನ ಗಣವೇಷಧಾರಿ ಸ್ವಯಸೇವಕರು ಹಾಗೂ ೫೦ ಜನ ಘೋಷ ವಾದಕರ ತಂಡ ಸೇರಿ ಒಟ್ಟು ೩೫೦ ಜನ ಗಣವೇಷಧಾರಿ ಸ್ವಯಸೇವಕರು ಮಧ್ಯಾಹ್ನ ೩-೩೦ರಿಂದ ೫-೪೫ರ ಒಳಗೆ ನಡೆಯಲಿರುವ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ.