ಶಾಸಕ ಪ್ರದೀಪ್​ ಈಶ್ವರ್​​ ಮೇಲೆ ಚಪ್ಪಲಿ ಎಸೆತ​ ಕೇಸ್; ನಾಲ್ವರನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು..Pradeep Eshwar

 Four Arrested After Slippers Hurled At MLA Pradeep Eshwar
Four Arrested After Slippers Hurled At MLA Pradeep Eshwar
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪ್ರದೀಪ್​ ಈಶ್ವರ್​​ ಮೇಲೆ ಚಪ್ಪಲಿ ಎಸೆತ​, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಿಡಿ
  • ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು
  • ಚಪ್ಪಲಿ ಎಸೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ
ಚಿಕ್ಕಬಳ್ಳಾಪುರ: ಇಲ್ಲಿನ ಕನ್ನಡಭವನದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಜೆಡಿಎಸ್ ಕಾರ್ಯಕರ್ತರು​ ಹಾಗೂ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​  ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣವು ಸದ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.  ಸದ್ಯ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರತ್ತ ಚಪ್ಪಲಿ ಎಸೆದವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ  ನಗರ ಠಾಣೆಯ ಪಿಎಸ್​ಐ ಅಮರ್​ ಅವರು ಸ್ವಯಂ ಪ್ರೇರಿತ ಎಫ್​ಐಆರ್​ ದಾಖಲಿಸಿಕೊಂಡಿದ್ದರು. ಶಾಸಕರತ್ತ ಚಪ್ಪಲಿ ಎಸೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕ ಅಡ್ಡಿಪಡಿಸಿದ ಆರೋಪದಡಿ ಕೇಸ್​ ದಾಖಲಾಗಿಸಿದೆ. ಇಡೀ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯ ನಂತರ,  ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಮತ್ತು ಮಹೇಂದ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ನಡೆದಿದ್ದೇನು?

ಶನಿವಾರ(ಜೂ.27)ರಂದು ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಹಾಲ್​ಗೆ ನುಗ್ಗಿದ ಜೆಡಿಎಸ್​ ಕಾರ್ಯಕರ್ತರು, ಪ್ರದೀಪ್​ ಈಶ್ವರ್​ ಅವರನ್ನು ವೇದಿಕೆಯಿಂದ ಕೆಳಕ್ಕೆ ಇಳಿಸಬೇಕು ಎಂದು ಗಲಾಟೆ ಮಾಡಿದರು, ಈ ವೇಳೆ ಸ್ಥಳದಲ್ಲೇ ಇದ್ದ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಗಲಾಟೆ ತಿಳಿಗೊಳಿಸಿದರು. ಆದರೆ, ಕಾರ್ಯಕ್ರಮದ ನಂತರ ಗಲಾಟೆ ವಿಕೋಪಕ್ಕೆ ತಿರುಗಿತು. 
ಪ್ರದೀಪ್​ ಈಶ್ವರ್​ ಅವರು ಸನ್​ರೂಫ್​ನಿಂದ ಹೊರಬಂದು ಮೆರವಣಿಗೆ ಹೊರಟಾಗ, ಅವರ ವಿರುದ್ಧ ಘೋಷಣೆ ಕೂಗಿದ ಜೆಡಿಎಸ್​ ಕಾರ್ಯಕರ್ತರಿಗೆ ಟಾಂಗ್​ ಕೊಡುವ ಸಲುವಾಗಿ ಮೀಸೆ ತಿರುವಿ, ತೋಳು ತಟ್ಟಿ  ಸವಾಲು ಹಾಕಿದರು. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಕಾರ್ಯಕರ್ತರು ಶಾಸಕರ ಮೇಲೆ ಚಪ್ಪಲಿ ಎಸೆದಿದ್ದಾರೆ. ಅದೃಷ್ಟವಶಾತ್ ಪಾದರಕ್ಷೆಯು ಶಾಸಕರಿಗೆ ತಗುಲದೆ ಸ್ವಲ್ಪದರಲ್ಲಿ ಬಿದ್ದಿದೆ. 
ಈ ಬಗ್ಗೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಜಿ ಪ್ರಭು ಅವರು ಮಾತನಾಡಿದ್ದು,  ಕಾರ್ಯಕ್ರಮ ಅರ್ಥಪೂರ್ಣವಾಗಿ, ಶಾಂತಿಯುತವಾಗಿ ಜರುಗುತ್ತಿತ್ತು. ಆದರೆ, ಈ ಗಲಾಟೆ ಬೇಸರ ತರಿಸಿದೆ. ಸದ್ಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

ಬಿಕೆ ಹರಿಪ್ರಸಾದ್ ಏನಂದ್ರು?

ಚಿಕ್ಕಬಳ್ಳಾಪುರ ಶಾಸಕರಾದ  ಪ್ರದೀಪ್ ಈಶ್ವರ್ ಅವರ ಮೇಲೆ ಸಾರ್ವಜನಿಕವಾಗಿ ವಿರೋಧ ಪಕ್ಷದವರು ಚಪ್ಪಲಿ ಎಸೆದು ನಡೆಸಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವಾದದಿಂದ ಎದುರಿಸಲಾಗದವರು, ಪ್ರಜಾಪ್ರಭುತ್ವದ ಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗದವರು ಮಾತ್ರ ಇಂತಹ ಹೇಯ ಮತ್ತು ಹೇಡಿತನದ ಕೃತ್ಯಗಳಿಗೆ ಇಳಿಯುತ್ತಾರೆ.
ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನದಿಂದ ಹತ್ತಿಕ್ಕಲು ಹೊರಟಿರುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ. ಜನರ ತೀರ್ಪಿಗೆ ಗೌರವ ಕೊಡುವ ಪ್ರಜಾಪ್ರಭುತ್ವದಲ್ಲಿ ಇಂತಹ ದುಷ್ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ. ಪ್ರದೀಪ್ ಈಶ್ವರ್ ಅವರು ಎದೆಗುಂದಬೇಕಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಸತ್ಯ, ಪ್ರಜಾಪ್ರಭುತ್ವ ಮತ್ತು ಜನರ ಪರವಾದ ಧ್ವನಿಯನ್ನು ಇಂತಹ ಕೃತ್ಯಗಳಿಂದ ಯಾರೂ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಪ್ರಿಯಾಂಕ್​ ಖರ್ಗೆ ಕಿಡಿ

ಶಾಸಕರ ಮೇಲೆ ಚಪ್ಪಲಿ ಎಸೆಯೋದು ತಪ್ಪು. ಕಾನೂನಿನ ಇತಿಮಿತಿಯಲ್ಲಿದ್ದರೆ ರಾಜ್ಯಕ್ಕೆ ಒಳ್ಳೆಯ ಹೆಸರು.  ಜಿಡಿಎಸ್​ಗೆ ಅಸ್ತಿತ್ವದ ಪ್ರಶ್ನೆ ಶುರುವಾಗಿದೆ. ಮೊನ್ನೆ ಅಡ್ಡಮತದಾನ ಹಾಕಿರುವುದು ಅವರಲ್ಲಿರುವ ನಾಯಕತ್ವದ ಕೊರತೆ ಬಗ್ಗೆ ತೋರಿಸುತ್ತದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net