ಮುಖ್ಯಮಂತ್ರಿಗಳೇ, ಸ್ಪಂದನಾಪೂರ್ವಕ ಉತ್ತರ ನೀಡದೆ ಹೀಗೆ ಮಾಡಿದ್ದು ಎಷ್ಟು ಸರಿ?

BY Vijayendra (Left) DK Shivakumar (Right)
ಮುಖ್ಯಮಂತ್ರಿಗಳೇ, ಸ್ಪಂದನಾಪೂರ್ವಕ ಉತ್ತರ ನೀಡದೆ ಹೀಗೆ ಮಾಡಿದ್ದು ಎಷ್ಟು ಸರಿ?
Published on: 

| ಬಿ.ವೈ. ವಿಜಯೇಂದ್ರ (ಲೇಖಕರು- ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭೆ ಸದಸ್ಯರು)

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಶ್ರೀಮಂತಿಕೆಯ ಕರ್ನಾಟಕವನ್ನು ಕೊಂಡಾಡಿದ್ದಾರೆ. ಅವರು ಪತ್ರ ಬರೆದಿರುವ ಉದ್ದೇಶವೇ ರಾಜ್ಯದ ಅಭಿವೃದ್ಧಿಯೊಂದಿಗೆ ನಾವಿದ್ದೇವೆ, ನೀವೂ ಕೈಜೋಡಿಸಿ ಎಂಬ ಸಂದೇಶ ರವಾನಿಸಿದೆ. ರಾಜ್ಯ ಕೇಂದ್ರ ಪರಸ್ಪರ ಸಹಕಾರದಿಂದ ಮುನ್ನಡೆದರೆ ವಿಕಸಿತ ಭಾರತದ ಗುರಿ ಸಾಧ್ಯ ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಪತ್ರಕ್ಕೆ ಪ್ರತಿಯಾಗಿ ಸ್ಪಂದನಾಪೂರ್ವಕವಾಗಿ ರಾಜ್ಯದ ಸಮಸ್ಯೆಗಳನ್ನೂ ಸೇರಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಹೇಗೆ ಸಾಗಬಹುದು ಎಂಬುದನ್ನು ಮುಖ್ಯಮಂತ್ರಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರೆ ಅದು ಘನತೆ ಹೆಚ್ಚಿಸುತ್ತಿತ್ತು. ಕೇಂದ್ರದ ಸಹಕಾರವನ್ನು ಕೇಳುವ ಕಾಳಜಿಯ ಧ್ಯೋತಕವಾಗುತ್ತಿತ್ತು. ಆದರೆ ಮುಖ್ಯಮಂತ್ರಿಯವರ ಪತ್ರದ ಸಾರ ಕೇಂದ್ರ ಸಂಪೂರ್ಣ ಅಸಹಕಾರ ತೋರುತ್ತಿದೆ ಎಂದು ಬಿಂಬಿಸುವಂತಿದೆ.

ಪ್ರಧಾನಿಯವರು ಪತ್ರದಲ್ಲಿ ಕನ್ನಡ ಕುಲಕೋಟಿಗೆ ಹೃನ್ಮನಸಿನ ಶುಭಾಶಯ ಹಾರೈಸಿದ್ದಾರೆ. ಜತೆಗೆ ಜಲಸಂಪತ್ತನ್ನು ಬೆಳೆಸುವ ಕಾಳಜಿ, ಸ್ವಚ್ಛತೆಗೆ ಆದ್ಯತೆ ನೀಡುವ ಹಾಗೂ ನಗರಗಳನ್ನು ಅಭಿವೃದ್ಧಿಪಡಿಸಬೇಕಾದ ನಿಟ್ಟಿನಲ್ಲಿ ರಾಜ್ಯಕ್ಕೆ ಸರ್ವ ರೀತಿಯ ಸಹಕಾರ-ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಶತಮಾನಗಳ ಹಿಂದೆ ಮಹಾತ್ಮ ಗಾಂಧಿಯವರು ಬೆಳಗಾವಿಗೆ ಆಗಮಿಸಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನೆನಪನ್ನು ಗೌರವ ಹಾಗೂ ಔದಾರ್ಯದ ಮನಸ್ಸಿನಿಂದ ಉಲ್ಲೇಖಿಸಿದ್ದಾರೆ.

ಭಾರತ 2040ರ ವೇಳೆಗೆ ವಿಕಸಿತ ಭಾರತವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ನಾವು ತೊಡಬೇಕಾದ ಸಂಕಲ್ಪ ಏಕತೆ, ಸಹಭಾಗಿತ್ವ ಹಾಗೂ ಸಾಮೂಹಿಕ ಪ್ರಯತ್ನದ ಅವಶ್ಯಕತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವಿಕಸಿತ ಭಾರತದ ಸಂಕಲ್ಪವು ದೇಶವನ್ನು ಜಗತ್ತಿನ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನ ಕಾಳಜಿಯಾಗಿದೆ ಎಂದು ಹೇಳುವ ಮೂಲಕ ರಾಷ್ಟ್ರದ ಪ್ರತಿಯೊಬ್ಬರ ಕೊಡುಗೆ ಭವಿಷ್ಯದಲ್ಲಿ ಮಹತ್ವದ ಶಕ್ತಿ ನೀಡುತ್ತದೆ ಎಂಬ ಸಂದೇಶ ನೀಡಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಬೇಡಿಕೆಯ ಹೆಸರಿನಲ್ಲಿ ಪ್ರಧಾನಿಗಳ ಔದಾರ್ಯ ಗುಣವನ್ನು ಚುಚ್ಚಬೇಕೆನ್ನುವ ಮನೋಭಾವ ವ್ಯಕ್ತಪಡಿಸುವಂತಿದೆ.

2014ರ ಹಿಂದಿನ ಭಾರತದ ಸ್ಥಿತಿಗೂ ಮೋದಿಯವರು 3ನೇ ಅವಧಿಯಲ್ಲಿ ಮುನ್ನಡೆದಿರುವ 12 ವರ್ಷಗಳ ಆಡಳಿತಾವಧಿಯ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ದೇಶದ ಜನ ಕಣ್ಣಾರೆ ಕಾಣುತ್ತಿದ್ದಾರೆ. ಇದರಲ್ಲಿ ಕರ್ನಾಟಕವೂ ಅಗ್ರಸ್ಥಾನದಲ್ಲಿದೆ, ಅಭಿವೃದ್ಧಿಯ ಪಥದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮವಾಗಿ ರಾಷ್ಟ್ರದಲ್ಲಿ ನಮ್ಮ ರಾಜ್ಯ ಮುಂಚೂಣಿ ಸ್ಥಾನದಲ್ಲಿದೆ ಎನ್ನುವುದನ್ನು ರಾಜ್ಯದ ಸಿಎಂ ಉಲ್ಲೇಖಿಸಿ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕಿತ್ತು. ರಾಜ್ಯದ ಬೇಡಿಕೆಗಳು ಏನೇ ಇರಲಿ, ಆದರೆ ಆ ಬೇಡಿಕೆಗಳ ಹೆಸರಿನಲ್ಲಿ ರಾಜಕೀಯ ಲೇಪನ ಹಚ್ಚುವ ಪತ್ರ ಬರೆದಿದ್ದು, ಪರಸ್ಪರ ಔದಾರ್ಯಗಳ ವಿನಿಮಯಕ್ಕೆ ಪೂರಕವಲ್ಲ ಎಂಬುದನ್ನು ಕರ್ನಾಟಕದ ಜನತೆ ಅರಿಯದಷ್ಟು ಮೂರ್ಖರಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸರಣಿ ವೈಫಲ್ಯಗಳು, ಭ್ರಷ್ಟಾಚಾರದ ಹಗರಣಗಳು, ಅಭಿವೃದ್ಧಿ ಶೂನ್ಯ ಆಡಳಿತ, ಜನತೆಯ ವಿಶ್ವಾಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ ಎಂಬುದಕ್ಕೆ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಸಾಕ್ಷಿ ಒದಗಿಸಿದೆ.

ಭೀಕರ ಬರಗಾಲಕ್ಕೆ ಸಿಲುಕಿರುವ ರೈತರಿಗೆ ಸಣ್ಣ ಪ್ರಮಾಣದಲ್ಲಿ ಪರಿಹಾರ ಘೊಷಿಸಲಾಗಿದೆ. ಹೋಗಲಿ ಎಂದರೆ ಅದನ್ನೂ ರೈತರಿಗೆ ಇನ್ನೂ ತಲುಪಿಸಲಾಗದ ಸರ್ಕಾರದ ನಡೆಯ ಹಿಂದಿರುವ ಕಾರಣ ಬೊಕ್ಕಸ ಬರಿದಾಗಿರುವುದು ಎಂಬುದು ಯಾರಿಗೂ ತಿಳಿಯದ ಕಾರಣವೇನಲ್ಲ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ, ಉಳಿದಿರುವ 2.50 ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಯಾಗುವ ಪ್ರಕ್ರಿಯೆಗಳು ಸರಿಯಾದ ದಿಕ್ಕಿನಲ್ಲಿ ಆರಂಭವಾಗಿಲ್ಲ. ಕೆಪಿಎಸ್ಸಿ ಹಗರಣ ಉದ್ಯೋಗಾಕಾಂಕ್ಷಿ ಯುವ ಜನರನ್ನು ಹತಾಶೆಯ ಅಂಚಿಗೆ ತಳ್ಳಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಹಣ ಇಂದಿಗೂ ನಿರ್ವಹಿಸಲು ಹೆಣಗಾಡುತ್ತಿರುವ ಭಾಗ್ಯಗಳಿಗೆ ಹಾಗೂ ಇತರ ಉದ್ದೇಶಗಳಿಗೆ ಬಳಕೆಯಾಗಿದ್ದು ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಣಕ್ಕೆ ಕನ್ನ ಹಾಕಿದ್ದು, ಈ ಸರ್ಕಾರ ಪರಿಶಿಷ್ಟರಿಗೆ ಕೊಟ್ಟ ಕೊಡುಗೆಯಾಗಿದೆ. ಮಹಿಳೆಯರ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಹೆಸರಿನಲ್ಲಿ ಮಹಿಳೆಯರ ನೈಜ ಕಲ್ಯಾಣ ಕಾರ್ಯಬದಿಗೆ ಸರಿಸಲಾಗಿದೆ.

ಸರಣಿ ರೂಪದಲ್ಲಿ ಮದ್ಯದ ಮೇಲಿನ ದರ ಏರಿಸುತ್ತಲೇ ಸರ್ಕಾರ ಮುಂದೆ ಸಾಗಿದೆ. ಇದೀಗ ಬಸ್ ದರ, ಹಾಲಿನ ದರ, ತರಕಾರಿ, ದವಸ-ಧಾನ್ಯ ಹಾಗೂ ಮೂಲಸೌಕರ್ಯಗಳ ದರಗಳನ್ನು ಏರಿಸುತ್ತಲೇ, ಬಡವರು ಹಾಗೂ ಜನಸಾಮಾನ್ಯರ ಜೀವನ ಕ್ರಮಗಳ ಮೇಲೆ ನಿರಂತರ ಬರೆ ಎಳೆಯಲಾಗುತ್ತಿದೆ. ನೀರಾವರಿ ಯೋಜನೆಗಳಂತೂ ನಿಂತ ನೀರಾಗಿವೆ. ಸರ್ಕಾರದ ವೈಫಲ್ಯವನ್ನು ಪಟ್ಟಿ ಮಾಡುತ್ತಾ ಹೋದರೆ ಪದಗಳೂ ಸಾಲದು, ಪುಟಗಳೂ ಸಾಲದು ಎಂಬ ಸ್ಥಿತಿ ನಿರ್ವಣವಾಗಿದೆ. ಇಂತಹ ದುಃಸ್ಥಿತಿ ಮುಂದಿಟ್ಟುಕೊಂಡು, ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯದ ಪರ ಬೇಡಿಕೆ ಮುಂದಿಟ್ಟಿರುವುದು ರಾಜ್ಯದ ಜನರ ದಿಕ್ಕುತಪ್ಪಿಸುವ ಉದ್ದೇಶವೇ ಹೊರತು ಜನಕಾಳಜಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದಲ್ಲ ಎಂಬುದು ಪತ್ರದ ಸಾರ ಅವಲೋಕಿಸಿದರೆ ಮನನವಾಗುತ್ತದೆ.

ಪ್ರಧಾನಿಗಳ ಶುಭಕೋರಿದ ಪತ್ರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸುವುದು ಸಜ್ಜನಿಕೆಯ ಲಕ್ಷಣ ಎಂದು ಬಣ್ಣಿಸಲಾಗದು. ಬದಲಾಗಿ ಕೇಂದ್ರ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಉಲ್ಲೇಖಿಸಿ, (ಉದಾಹರಣೆ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ವದರ್ಜೆಯ ಟರ್ವಿುನಲ್-2, ಶಿವಮೊಗ್ಗ ವಿಮಾನ ನಿಲ್ದಾಣ, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಹಾಗೂ ಧಾರವಾಡದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮೊದಲಾದ ಕೊಡುಗೆಗಳು) ಧನ್ಯತೆಯ ಭಾವ ವ್ಯಕ್ತಪಡಿಸಿ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ 63 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಿರುವುದು ಹಾಗೂ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಳ ಅಭಿವೃದ್ಧಿಗೆ 10,000 ಕೋಟಿ ರೂಪಾಯಿಗೂ ಅಧಿಕ ಅನುದಾನ ಮಂಜೂರು ಮಾಡಿರುವುದು ಕೇಂದ್ರ ಸರ್ಕಾರ ನೀಡಿರುವ ಆದ್ಯತೆ ಉಲ್ಲೇಖಿಸುವುದರ ಜತೆಗೆ ನಮ್ಮ ಮೆಟ್ರೊದ ಪಿಂಕ್ ಲೈನ್ ವಿಸ್ತರಣೆ, ಬೆಂಗಳೂರಿನ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಆಧುನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಕೇಂದ್ರದ ಕೊಡುಗೆ ಉಲ್ಲೇಖಿಸಿ, ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಅವಶ್ಯವಿರುವ ವಸ್ತುಸ್ಥಿತಿಯ ಬೇಡಿಕೆ ಮಂಡಿಸಿದ್ದರೆ ಮುಖ್ಯಮಂತ್ರಿಯವರ ಪತ್ರ ನಿಜಕ್ಕೂ ಅರ್ಥಪೂರ್ಣವೆನಿಸುತ್ತಿತ್ತು ಹಾಗೂ ರಾಜ್ಯದ ಬಗೆಗಿನ ನೈಜ ಕಾಳಜಿಯ ಸಂಕೇತ ಸಾರುತ್ತಿತ್ತು. ಆದರೆ ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿ ಪತ್ರಕ್ಕೆ ರಾಜಕೀಯದ ಕೆಸರು ಎರಚಲು ಪ್ರಯತ್ನಿಸಿರುವುದು ರಾಜ್ಯದ ಅಭಿವೃದ್ಧಿ ಹಾಗೂ ಘನತೆಯ ದೃಷ್ಟಿಯಿಂದ ಪೂರಕವೆನಿಸುವುದಿಲ್ಲ.