ಅತಿವೃಷ್ಟಿ ನೆರೆಹಾವಳಿ ಹಾನಿಗೆ ಪರಿಹಾರ ಕಾರ್ಯಕ್ಕೆ ನೆರವಿಗೆ ಮೊರೆ
ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಬೇಡಿಕೆಗಳು ಪ್ರಸ್ತಾಪ ಸಾಧ್ಯತೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಭೇಟಿ ಮಾಡಲಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಪ್ರಧಾನವಾಗಿ ಪ್ರಸ್ತಾಪಿಸಿ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ. CM Siddaramaiah
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಮೂಲಸವಲತ್ತುಗಳ ಪುನಶ್ಚೇತನ ಹಾಗೂ ಮರು ಸ್ಥಾಪನೆ ಕಾರ್ಯಕ್ರಮದಡಿ 1545 ಕೋಟಿ ರೂ ಜತೆಗೆ ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ, ಸಂತ್ರಸ್ತರ ಜೀವನೋಪಾಯ ಕಲ್ಪಿಸಲು ನೆರವಿನ ಬಗ್ಗೆ ಚರ್ಚಿಸಲಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆ ಅ.30ರಂದು ತೀರ್ಮಾನ ತೆಗೆದುಕೊಂಡಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿಗೆ ಕಾಲಾವಕಾಶ ಸಿಗದೆ ಅಧಿಕೃತ ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ.
ಇದೀಗ ಪ್ರಧಾನಿ ಮೋದಿಯವರು ಭೇಟಿಗೆ ನೀಡಿದ ಕಾಲಾವಕಾಶವನ್ನು ಸಿಎಂ ಬಳಸಿಕೊಂಡು ಅಧಿಕೃತ ಮನವಿಪತ್ರ ಸಲ್ಲಿಸಲಿದ್ದಾರೆ. ಇದರೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆ, ಇತ್ತೀಚೆಗೆ ಪತ್ರ ಬರೆದು ಪ್ರಸ್ತಾಪಿಸಿದ ವಿಷಯಗಳತ್ತ ಮತ್ತೆ ಗಮನಸೆಳೆಯಲಿದ್ದಾರೆ.
ಕಬ್ಬು ಎ್ಆರ್‌ಪಿ ಮಾನದಂಡ ಬದಲು, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆಗೆ ಬೆಂಬಲ ಬೆಲೆ ಪರಿಷ್ಕರಣೆ, ಹೆಚ್ಚುವರಿ ರ್ತು ಅವಕಾಶ, ಸಕ್ಕರೆ ಗೃಹ ಮತ್ತು ವಾಣಿಜ್ಯಿಕ ಬೆಲೆ ಪ್ರತ್ಯೇಕ, ರಾಜ್ಯಕ್ಕೆ ಉದ್ಯಮ-ಬಂಡವಾಳ ಆಕರ್ಷಿಸಲು ಬೆಂಬಲ ಯಾಚಿಸಲಿದ್ದಾರೆ.
ಪ್ರಮುಖ ಬೇಡಿಕೆಗಳು
ಜತೆಗೆ ಯುಕೆಪಿ ಮೂರನೇ ಹಂತದ ಯೋಜನೆಗೆ ವಿಶೇಷ ಆರ್ಥಿಕ ನೆರವು, ಹಳೆಯ ಬೇಡಿಕೆಗಳಾದ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ. ಬಿಡುಗಡೆ ಮಾಡದಿರುವುದು,
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಪ್ರಸ್ತಾಪಿಸಿದ್ದ 11,300 ಕೋಟಿ ರೂ.ಗಳ ವಿಶೇಷ ನೆರವಿನತ್ತ ಗಮನಸೆಳೆಯುವ ಸಾಧ್ಯತೆಗಳಿವೆ.
ದೇಶದ ಐದು ಟ್ರಿಲಿಯನ್ ಆರ್ಥಿಕತೆ ಗುರಿಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಆರ್ಥಿಕತೆ ಕೊಡುಗೆ ನೀಡಲು ಅಪೇಕ್ಷಿಸಿದೆ. ಪೂರಕವಾಗಿ ಹಸಿರು ಇಂಧನ ಉಪಕ್ರಮ, ಉದ್ಯಮ- ವಿದೇಶಿ ಬಂಡವಾಳ ಆಕರ್ಷಣೆಗೆ ಕೇಂದ್ರ ಸರ್ಕಾರದ ಬೆಂಬಲ, ಸಹಕಾರ ಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡುವ ನಿರೀಕ್ಷೆಯಿದೆ.