ಕೋಳಿಗೂ ಸಿಗಲಿದೆ ಅಪಘಾತ ಪರಿಹಾರ! 4.51 ಲಕ್ಷ ರೂ. ನೀಡಲು ವಿಮಾ ಕಂಪನಿಗೆ ‘ಹೈ’ ಆದೇಶ

ಕೋಳಿಗೂ ಸಿಗಲಿದೆ ಅಪಘಾತ ಪರಿಹಾರ
ಕೋಳಿಗೂ ಸಿಗಲಿದೆ ಅಪಘಾತ ಪರಿಹಾರ
Published on

ಪ್ರಮುಖ ಮುಖ್ಯಾಂಶಗಳು

  • 4.51 ಲಕ್ಷ ರೂ. ನೀಡಲು ವಿಮಾ ಕಂಪನಿಗೆ ‘ಹೈ’ ಆದೇಶ
  • ಮೋಟಾರು ವಾಹನ ಕಾಯ್ದೆ ಅಡಿ ಸರಕು ಎಂದು ಪರಿಗಣನೆ

ಬೆಂಗಳೂರು: ಮೋಟಾರು ವಾಹನ ಕಾಯ್ದೆ ಅಡಿ ಕೋಳಿಗಳು ಸಹ ಸಾಕುಪ್ರಾಣಿಗಳ ವ್ಯಾಪ್ತಿಗೆ ಬರಲಿದ್ದು, ಅವುಗಳನ್ನು ಸರಕು ಎಂದು ಪರಿಗಣಿಸಿ ಮಾಲೀಕರಿಗೆ ಅಪಘಾತ ಪರಿಹಾರ ವಿಧಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ಅಪಘಾತದಲ್ಲಿ ಕೋಳಿಗಳು ಸತ್ತ ಕಾರಣ ಮಾಲೀಕನಿಗೆ 4.51 ಲಕ್ಷ ರೂ. ಪರಿಹಾರ ನೀಡುವಂತೆ ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ, ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳಡಿ ಜಾನುವಾರು ಎಂದರೆ ಎಮ್ಮೆ, ಹಸು, ಕುರಿ, ಮೇಕೆ ಮುಂತಾದ ವುಗಳು ಮಾತ್ರ ಬರುತ್ತವೆ. ಅದರಲ್ಲಿ ಕೋಳಿಗಳ ಹೆಸರಿಲ್ಲ ನಿಜ. ಆದರೆ, ಕಾಯ್ದೆ ಅಡಿ ಸರಕುಗಳು ಎಂದು ಗುರುತಿಸಲಾದ ವಿಭಾಗದಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಬರುತ್ತವೆ. ಆದ್ದರಿಂದ, ಕೋಳಿ ಕೂಡ ಪರಿಹಾರದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

2 ಸಾವಿರ ಕೋಳಿಗಳ ಸಾವು

ಬಳ್ಳಾರಿಯ ಕೋಳಿ ಫಾರ್ಮ್​ ಮಾಲೀಕ ಕೆ. ವೀರನಾರಾಯಣ ಸ್ವಾಮಿ 2013ರ ಜೂ. 19ರಂದು 2,250 ಬ್ರಾಯ್ಲರ್ ಕೋಳಿಗಳನ್ನು ಸಾಗಿಸುತ್ತಿದ್ದಾಗ ವಾಹನ ಮಗುಚಿಬಿದ್ದು 2 ಸಾವಿರ ಕೋಳಿಗಳು ಸತ್ತಿದ್ದವು. ಉಳಿದ ಕೋಳಿಗಳನ್ನು ಸಾರ್ವಜನಿಕರು ಕೊಂಡೊಯ್ದಿದ್ದರು. ಇದರಿಂದ ನನಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಕೋರಿ ವೀರನಾರಾಯಣ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿಯು 4.51 ಲಕ್ಷ ರೂ. ಪರಿಹಾರ ನೀಡುವಂತೆ ವಿಮಾ ಕಂಪನಿಗೆ 2016ರಲ್ಲಿ ಆದೇಶಿಸಿತ್ತು. ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ಪಶುವೈದ್ಯರ ವರದಿ ಅನಗತ್ಯ

ಕೋಳಿಗಳ ಸಾವಿಗೆ ಸಂಬಂಧಿಸಿದಂತೆ ಪಶುವೈದ್ಯರ ಯಾವುದೇ ಅಧಿಕೃತ ವರದಿಯನ್ನು ಮಾಲೀಕ ಸಲ್ಲಿಸಿಲ್ಲ ಎಂದು ವಿಮಾ ಕಂಪನಿ ವಾದಿಸಿತ್ತು. ಈ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್, ಮಹಜರು ವರದಿ ಹಾಗೂ ಬ್ಯಾಂಕ್ ಖಾತೆಯ ದಾಖಲೆಗಳಲ್ಲಿ ಕೋಳಿಗಳ ಖರೀದಿ ಮತ್ತು ಸಾವಿನ ಬಗ್ಗೆ ಸ್ಪಷ್ಟ ಉಲ್ಲೇಖವಿರುವುದರಿಂದ ಪಶುವೈದ್ಯರ ಪ್ರತ್ಯೇಕ ವರದಿಯ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net