ಸೆ.3 ಕೋಳಿ ಅಂಗಡಿಗಳು ಬಂದ್: ಸ್ವಾತಂತ್ಯ ಉದ್ಯಾನದಲ್ಲಿ ವ್ಯಾಪಾರಿಗಳು ಪ್ರತಿಭಟನೆ- poultry Traders protest

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್
Published on
ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು( ಬಿಎಸ್‌ಡಬ್ಲ್ಯುಎಂಎಲ್) ಕೋಳಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರತಿ ಕೆಜಿ ತ್ಯಾಜ್ಯಕ್ಕೆ ಅವೈಜ್ಞಾನಿಕವಾಗಿ 5 ರೂ.ಶುಲ್ಕ ವಿಧಿಸಿರುವ ಕ್ರಮ ಖಂಡಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್, ಸ್ವಾತಂತ್ರ್ಯ ಉದ್ಯಾನದಲ್ಲಿ ಸೆ.3 ಮತ್ತು 4ರಂದು ಪ್ರತಿಭಟನೆ ನಡೆಸಲಿದೆ.
ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ಮಾತನಾಡಿ, ಸೆ.3ರಂದು ನಗರದ ಎಲ್ಲ ಕೋಳಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ. ಸೆ.4ರಂದು ಅಂಗಡಿಗಳು ತೆರೆದಿದ್ದರೂ ಯಾವುದೇ ವ್ಯಾಪಾರ ಮಾಡುವುದಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ಕೋಳಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಿಸಲು ನಾಲ್ಕು ಖಾಸಗಿ ಕಂಪನಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ. ಈ ಕಂಪನಿಗಳು ಮಧ್ಯವರ್ತಿಗಳ ಮೂಲಕ ಕೋಳಿ ತ್ಯಾಜ್ಯ ಸಂಗ್ರಹಿಸುತ್ತಿವೆ. ಪ್ರತಿ ಕೆಜಿ ಕೋಳಿ ತ್ಯಾಜ್ಯ ಸಂಗ್ರಹಿಸಲು 5 ರೂ. ಶುಲ್ಕವನ್ನು ನಮ್ಮಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಳಿ ಅಂಗಡಿಗಳಲ್ಲಿ ಸಂಗ್ರಹಿಸುವ ಕೋಳಿ ತ್ಯಾಜ್ಯವನ್ನು ಖಾಸಗಿ ಕಂಪನಿಗಳು ತರಹೇವಾರಿ ಗೊಬ್ಬರ ತಯಾರಿಸಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಲಕ್ಷಾಂತರ ರೂ.ಹಣ ಗಳಿಸುತ್ತಿವೆ. ಅಡ್ಡದಾರಿಯಲ್ಲಿ ಹಣ ಮಾಡಿಕೊಳ್ಳಲು ಬಿಎಸ್‌ಡಬ್ಲ್ಯುಎಂಎಲ್, ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ದಂಧೆಯಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಗೊಬ್ಬರ ತಯಾರಿಸಲು ಕೋಳಿ ಅಂಗಡಿಗಳಲ್ಲಿ ಸಂಗ್ರಹಿಸುವ ತ್ಯಾಜ್ಯಕ್ಕೆ (ಕಚ್ಛಾವಸ್ತು), ಖಾಸಗಿ ಕಂಪನಿಗಳು ನಮಗೆ ಹಣ ಕೊಡಬೇಕು. ಹಾಗಾಗಿ, ಕೆಲವೊಂದು ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲಿದ್ದು,ಸಾವಿರಾರು ವ್ಯಾಪಾರಿಗಳು ಆಗಮಿಸಲಿದ್ದಾರೆ ಎಂದು ಕೆ.ಎನ್.ನಾಗರಾಜು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ, ಎನ್.ಸೆಲ್ವರಾಜು, ಖಜಾಂಚಿಗಳಾದ ನಾಗರಾಜ, ರಘುಕುಮಾರ್, ಸದಸ್ಯರಾದ ಮಂಜುನಾಥ್ ಮತ್ತು ಮದ್ದುಕೃಷ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net