ಗುಬ್ಬಿ:ಮಳೆ, ಚಳಿ ಲೆಕ್ಕಿಸದೆ ಓದುಗರ ಮನೆ ಮನಗಳಿಗೆ ತಲುಪಿರುವ ಪತ್ರಿಕೆ ಹಂಚುವ ಹುಡುಗರ ಯೋಗಕ್ಷೇಮ ವಿಚಾರಿಸುವ ಕೆಲಸ ನಿರಂತರ ನಡೆಯಬೇಕು ಎಂದು ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಪತ್ರಿಕೆ ಹಂಚಿಕೆದಾರರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕೆ ವಿತರಕರಿಗೆ ಜರ್ಕಿನ್ ವಿತರಿಸಿ ಮಾತನಾಡಿ, ದೇಶ, ವಿದೇಶ ಸುದ್ದಿಗಳನ್ನು ಬೆಳಗ್ಗೆ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ತಮ್ಮ ಬಡತನ ಬೇಗೆಯಲ್ಲಿ ಸ್ವಾಭಿಮಾನದ ದುಡಿಮೆಗೆ ನಿಂತಿದ್ದಾರೆ. ಅಂತಹ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕೆಲಸ ಸಮುದಾಯ ಮಾಡಬೇಕು. ಇಂತಹ ಸ್ವಾಭಿಮಾನಿ ಹಂಚಿಕೆದಾರರ ಬಗ್ಗೆ ಸರ್ಕಾರ ಕೂಡ ಗಮನಹರಿಸಬೇಕಿದೆ. ಕನಿಷ್ಠ ಸವಲತ್ತು ಒದಗಿಸುವುದು ಅಷ್ಟೇ ಅಲ್ಲದೇ ಅವರ ಜೀವನ ರೂಪಿಸುವ ಕೆಲಸ ಸರ್ಕಾರದ ಮೂಲಕ ವಿತರಕರ ಸಂಘ ಮಾಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಚಿ.ನಿ.ಪುರುಷೋತ್ತಮ್ ಮಾತನಾಡಿ, ಪತ್ರಿಕೋದ್ಯಮ ಸಂಕಷ್ಟಕ್ಕೀಡಾಗಿದೆ. ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸಿದೆ. ಪ್ರಸರಣ ಸಂಖ್ಯೆ ಇಳಿಮುಖವಾದರೂ ಜಗ್ಗದೆ ಇಂದಿಗೂ ಮನೆ ಬಾಗಿಲಿಗೆ ಪತ್ರಿಕೆ ಹಂಚುವ ಹುಡುಗರ ಶ್ರಮಕ್ಕೆ ಅಭಿನಂದನೆ ಸಲ್ಲಿಸಬೇಕಿದೆ ಎಂದರು.
ಚೆಸ್ ಅಸೋಸೇಷನ್ ಅಧ್ಯಕ್ಷ ಮಧುಕರ್, ಮೀಡಿಯಾ ಬ್ಯಾಕ್ ಆಫೀಸ್ ಸಿಇಒ ಎಸ್.ರಘು ಮಾತನಾಡಿದರು.
ತಾಲೂಕು ಗೌರವಾಧ್ಯಕ್ಷ ರಮೇಶ್ ಗೌಡ, ತಾಲೂಕು ಅಧ್ಯಕ್ಷ ಜಿ.ಕೆ.ನರಸಿಂಹಮೂರ್ತಿ, ಉಪಾಧ್ಯಕ್ಷ ಕೆಂಪರಾಜ್, ಪ್ರಧಾನ ಕಾರ್ಯದರ್ಶಿ ಜಿ.ಬಿ.ಪುನೀತ್, ಖಜಾಂಚಿ ಮಂಜುನಾಥ್ ಇತರರು ಇದ್ದರು.