ಆವಾಸ ಮನೆ ಹಂಚಿಕೆ ಸಭೆಯಲ್ಲಿ ಗದ್ದಲ

ನಿಪ್ಪಾಣಿಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆವಾಸ ಯೋಜನೆ ಮನೆ ಹಂಚಿಕೆ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ನಿಪ್ಪಾಣಿಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆವಾಸ ಯೋಜನೆ ಮನೆ ಹಂಚಿಕೆ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
Published on
ವಿಜಯವಾಣಿ ಸುದ್ದಿಜಾಲ ನಿಪ್ಪಾಣಿ
ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಪಟ್ಟಣಕುಡಿ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಮನೆಗಳ ಹಂಚಿಕೆಗಾಗಿ ಬುಧವಾರ ಹಮ್ಮಿಕೊಂಡಿದ್ದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಸಭೆ ಮುಂದೂಡಲಾಯಿತು.
ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಮೊದಲ ನಾಲ್ಕು ಹಂತದ ಹಣ ಪಾವತಿಸಿದ 600 ಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಲಾಗುವುದು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, 948 ಲಾನುಭವಿಗಳು ಹಣ ಪಾವತಿಸಿರುವುದರಿಂದ ಎಲ್ಲರ ಹೆಸರನ್ನೂ ಲಾಟರಿಯಲ್ಲಿ ಸೇರಿಸಬೇಕು ಎಂದರು.
ಇದಕ್ಕೆ ಪ್ರತಿಯಾಗಿ ಶಾಸಕಿ ಶಶಿಕಲಾ ಜೊಲ್ಲೆ, 800 ಮನೆಗಳು ಸಿದ್ಧವಾಗಿರುವುದರಿಂದ 800 ಮಂದಿಗೆ ಮನೆ ಹಂಚಿಕೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಆದರೆ, ಇದಕ್ಕೂ ವಿರೋಧ ವ್ಯಕ್ತವಾಯಿತು. ಬೆಳಗ್ಗೆ 11.30ಕ್ಕೆ ಆರಂಭವಾದ ಸಭೆ ಸಂಜೆ 4.30ರವರೆಗೆ ಯಾವುದೇ ತೀರ್ಮಾನವಿಲ್ಲದೆ ಮುಂದುವರಿಯಿತು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಯೋಜನೆಯಲ್ಲಿ ಯಾವುದೇ ಪಕ್ಷಪಾತ ಮಾಡಿಲ್ಲ. ಎಲ್ಲ ನಿರಾಶ್ರಿತರಿಗೆ ಮನೆ ನೀಡಲಾಗುವುದು. ಮೊದಲಿಗೆ ನಾಲ್ಕು ಹಂತದ ಹಣ ಪಾವತಿಸಿದವರಿಗೆ ಆದ್ಯತೆ ನೀಡಬೇಕು. ಎಸ್ಸಿ, ಎಸ್‌ಟಿ ವರ್ಗಕ್ಕೆ 108 ಮನೆ ನೀಡುವ ಗುರಿ ಇತ್ತಾದರೂ ವಾಸ್ತವವಾಗಿ 203 ಮಂದಿಗೆ ಮನೆ ನೀಡಲಾಗಿದೆ. ಡಾ.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ 27 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಜೊಲ್ಲೆ ಗ್ರೂಪ್ ವತಿಯಿಂದ 1 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದರು.
ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ನಿಪ್ಪಾಣಿ ಅಭಿವೃದ್ಧಿಗೆ ಹಿಂದಿನ ಎಲ್ಲ ಶಾಸಕರೂ ಕೊಡುಗೆ ನೀಡಿದ್ದಾರೆ. ಕಾಳಮ್ಮವಾಡಿ ಒಪ್ಪಂದದಿಂದ ನೀರಿನ ಸಮಸ್ಯೆ ಪರಿಹಾರವಾಗಿದೆ. ಅಧಿಕಾರಿಗಳು ಲಾನುಭವಿಗಳ ಪಟ್ಟಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಕೆಲ ಲಾನುಭವಿಗಳು ನಾಲ್ಕು ಹಂತದ ಹಣ ಪಾವತಿಸಿದ್ದರೂ ಪಟ್ಟಿಯಲ್ಲಿ ಹೆಸರಿಲ್ಲ ಎಂದು ದೂರಿದರು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಹೆಸರು ಪಟ್ಟಿಯಲ್ಲೇ ಇರುವುದು ತಿಳಿದುಬಂತು. ಸಭೆಯಲ್ಲಿ ಗೊಂದಲ ಹೆಚ್ಚುತ್ತಿದ್ದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿ ಸುಭಾಸ ಸಂಪಗಾವಿ ಸಭೆ ಮುಂದೂಡಲಾಗಿದೆ ಎಂದು ಘೋಷಿಸಿದರು.
ಮನೆ ಹಂಚಿಕೆ ತಡೆದವರನ್ನು ಜನ ಕ್ಷಮಿಸುವುದಿಲ್ಲ:
ಮನೆಯಿಲ್ಲದ ನಿರಾಶ್ರಿತ ಕುಟುಂಬಗಳಿಗೆ ಮನೆ ನೀಡುವ ಕಾರ್ಯ ಪ್ರಾಮಾಣಿಕವಾಗಿ ಮಾಡಿದ್ದೇವೆ. ಆದರೆ, ಮನೆ ಹಂಚಿಕೆ ಸಭೆಗೆ ವಿರೋಧಿಗಳು ಅಡ್ಡಿಪಡಿಸಿದ್ದನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಅಧಿಕಾರಿಗಳ ತಪ್ಪು ನಿಲುವಿನಿಂದ ಕಾರ್ಯಕ್ರಮ ರದ್ದಾಗಿದೆ. ಇದರಿಂದ ಮನಸ್ಸಿಗೆ ನೋವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಲಾನುಭವಿಗಳಿಗೆ ಅವರ ಹಕ್ಕಿನ ಮನೆ ದೊರಕಿಸಿಕೊಡುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ಗುಂದೇಶಾ, ಮಾಜಿ ನಗರಾಧ್ಯಕ್ಷ ಜಯವಂತ ಭಾಟಲೆ, ಸುನೀಲ ಪಾಟೀಲ, ಬಂಡಾ ಘೋರಪಡೆ, ಪ್ರಶಾಂತ ಕೆಸ್ತಿ, ಬಾಳಾಸಾಹೇಬ ಜೋರಾಪುರೆ, ಜುಬೇರ್ ಬಾಗವಾನ್, ಸುಭಾಸ ಕದಂ, ಸದ್ದಾಂ ನಗರಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net