ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು, ಮಹಿಳಾ ಉಪನ್ಯಾಸಕಿಯರು ದೇಶೀಯ ಉಡುಗೆ ತೊಡುಗೆ ಧರಿಸಿ ಸ್ವದೇಶಿ ಮಂತ್ರ ಜಪಿಸಿದರು.indigenous
ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಪ್ಪಟ ದೇಸೀ ಸಂಸತಿಯನ್ನು ಬಿಂಬಿಸುವ ಉಡುಪುಗಳು, ನಾನಾ ಆಭರಣಗಳನ್ನು ಧರಿಸಿದ್ದಲ್ಲದೆ, ವಿಶೇಷ ಕೇಶ ವಿನ್ಯಾಸ ಮತ್ತಿತರ ಅಲಂಕಾರಗಳಲ್ಲಿ ಮಿಂಚಿದರು.
ಪ್ರತಿನಿತ್ಯ ಕಾಲೇಜಿನ ಸಮವಸ್ತ್ರದಲ್ಲಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಸೀರೆ, ಲಂಗ ದಾವಣಿ, ಮಹಾರಾಣಿ ವೇಷಗಳಲ್ಲಿ ಮಿಂಚಿದರೆ, ಹಣೆಯ ತುಂಬಾ ದೊಡ್ಡ ಗಾತ್ರದ ಕುಂಕುಮ, ಉದ್ದದ ಜಡೆ, ಮಲ್ಲಿಗೆ ಕೊಪ್ಪಿನ ಅಲಂಕಾರ, ಮೊಗ್ಗಿನ ಜಡೆ, ಹಳೆಯ ಕಾಲದ ಮಾದರಿಯ ಚಪ್ಪಲಿಗಳು, ಹೀಗೆ ಅಪ್ಪಟ ದೇಶೀಯ ಪ್ರೇಮ ಮೆರೆದರು.
ಇನ್ನು ಯುವಕರು ಬಿಳಿ ಪಂಚೆ, ಅಂಗಿ, ಕಚ್ಚೆ ಪಂಚೆ, ಪಟಾಪಟಿ ಚಡ್ಡಿ ಸೇರಿ ಮತ್ತಿತರ ಹಳೆಯ ವೇಷ ಭೂಷಣಗಳನ್ನು ಧರಿಸಿ ಅಳಿದು ಹೋಗುತ್ತಿರುವ ನಮ್ಮ ಭಾರತೀಯ ಬಟ್ಟೆಗಳು ಹಾಗೂ ಅಲಂಕಾರಗಳನ್ನು ಪರಿಚಯಿಸಿದರು.
ಇನ್ನು ಪ್ರಾಧ್ಯಾಪಕಿಯರೂ ಹಳೆಯ ಕಾಲದ ಸೀರೆ, ಅಲಂಕಾರ, ಕೇಶ ವಿನ್ಯಾಸದಲ್ಲಿ ಮಿಂಚಿದರೆ, ಪ್ರಾಧ್ಯಾಪಕರು ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಪಂಚೆ ಹಾಗೂ ಟವೆಲ್ಗಳನ್ನು ಹೆಗಲ ಮೇಲೆ ಹಾಕಿಕೊಂಡು ಗಮನ ಸೆಳೆದರು. ಕೆಲವರು ಜುಬ್ಬಾ, ಪೈಜಾಮ, ರೈತರ ವೇಷದಲ್ಲಿ ಮಿಂಚಿದರು.
ನಂತರ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರ್ಯಾಂಪ್ ವಾಕ್ ಮೂಲಕ ಫ್ಯಾಷನ್ ಲೋಕವನ್ನು ಪ್ರದರ್ಶಿಸಿದರು. ಒಟ್ಟಿನಲ್ಲಿ ಶನಿವಾರ ಕಾಲೇಜು ಅಪ್ಪಟ ಹಳ್ಳಿಯ ಹಾಗೂ ಭಾರತೀಯ ಸಂಸತಿಯ ಪ್ರತಿರೂಪವಾಗಿತ್ತು.