ಎಫ್‌ಎನ್‌ಎಸ್ ಯೋಜನೆಯಡಿ ಹೋಬಳಿಯ ಹುಳಿಗೆರೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ 120 ರೈತರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಬುಧವಾರ ರಾಗಿ ಹಾಗೂ ಬಿತ್ತನೆ ಕೃಷಿ ಪರಿಕರಗಳನ್ನು ಉಚಿತವಾಗಿ ವಿತರಿಸಿದರು.
ತಲಾ 5 ಕೆ.ಜಿ. ರಾಗಿ ಬೀಜ, 50 ಕೆ.ಜಿ. ಜಿಪ್ಸಂ, 50 ಕೆ.ಜಿ. ಪ್ರೋಮ್ ಹಾಗೂ 1 ಲೀಟರ್ ಬೇವಿನ ಎಣ್ಣೆ ಹಾಗೂ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಲಾಯಿತು.
ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಚನ್ನರಾಯಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ 15 ಸಾವಿರ ರೂ. ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅನಿರೀಕ್ಷಿತ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರಿಗೆ ಆರ್ಥಿಕ ಭದ್ರತೆ ದೊರೆಯುವ ದೃಷ್ಟಿಯಿಂದ ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪರಮ ದೇವರಾಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಗಜೇಂದ್ರ, ಸಹಾಯಕ ಕೃಷಿ ಅಧಿಕಾರಿ ದಿನೇಶ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಅರ್ಪಿತಾ ಹಾಗೂ ರೈತರು ಉಪಸ್ಥಿತರಿದ್ದರು.