ಸಲಿಂಗಿಗಳಿಗೆ ತೆರಿಗೆ ವಿನಾಯಿತಿಗೆ ಕೇಂದ್ರದ ವಿರೋಧ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ದುರುಪಯೋಗಕ್ಕೆ ಅವಕಾಶ ಎಂದು ಹೈಕೋರ್ಟ್​ನಲ್ಲಿ ವಾದ
  • ಸಂಗಾತಿ ಪದದ ಸೀಮಿತ ವ್ಯಾಪ್ತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆ
ಬೆಂಗಳೂರು: ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಸಂಗಾತಿಗಳಿಂದ ಪಡೆದ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಮದುವೆ ಎಂಬ ಕಾನೂನುಬದ್ಧ ಕೌಟುಂಬಿಕ ಸಂಬಂಧದ ವ್ಯಾಪ್ತಿಗೆ ಬರುತ್ತದೆ. ಅದನ್ನು ಲಿಂಗಾಧಾರಿತವಾಗಿ ನೀಡಲಾಗಿಲ್ಲ. ಹಾಗಿರುವಾಗ ಸಂಗಾತಿ (ಸ್ಪೌಸ್​) ಪದದ ವ್ಯಾಪ್ತಿಯನ್ನು ಸಂಲಿಂಗಿಗಳಿಗೆ ವಿಸ್ತರಿಸುವುದು ತೆರಿಗೆ ವ್ಯವಸ್ಥೆಯ ದುರುಪಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್​ನಲ್ಲಿ ವಾದಿಸಿದೆ. 
ಕೇವಲ ಲೈಂಗಿಕ ದೃಷ್ಟಿಕೋನದ ಆಧಾರದಲ್ಲಿ ತೆರಿಗೆ ವಿನಾಯಿತಿ ನಿರಾಕರಿಸಿರುವುದು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ವಾದಿಸಿ ಇಬ್ಬರು ಸಲಿಂಗಿ ವ್ಯಕ್ತಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯು  ನ್ಯಾಯಮೂರ್ತಿ ಬಿ.ಎಂ. ಶ್ಯಾಮ್​ಪ್ರಸಾದ್​ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಚಾಲ್ತಿಯಲ್ಲಿದೆ. ತೆರಿಗೆ ವಿನಾಯಿತಿಯನ್ನು ಸಲಿಂಗ ಸಂಗಾತಿಗಳಿಗೆ ಅನ್ವಯಿಸಬಹುದೆ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ ಸೂಚಿಸಿತ್ತು. 
ಇದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ, ಅರ್ಜಿದಾರರು ತಾವು ಸಲಿಂಗಿಗಳಾಗಿದ್ದು, ಸ್ಥಿರ ಸಂಬಂಧದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಸ್ಥಿರ ಸಂಬಂಧ ಏನು ಎಂಬುದನ್ನು ಒಬ್ಬ ತೆರಿಗೆ ಮೌಲ್ಯಮಾಪನ ಅಧಿಕಾರಿಯು ಹೇಗೆ ತನಿಖೆ ಮಾಡಲು ಸಾಧ್ಯ? ಇದೇ ಕಾರಣಕ್ಕಾಗಿ ಕಾನೂನಿನ ದುರುಪಯೋಗ ತಡೆಯುವ ಉದ್ದೇಶದಿಂದ ಮದುವೆ ಮತ್ತು ರಕ್ತಸಂಬಂಧಕ್ಕೆ ಮಾತ್ರ ಈ ವಿನಾಯಿತಿಯನ್ನು ಸೀಮೀತಗೊಳಿಸಲಾಗಿದೆ ಎಂದು ತಿಳಿಸಿದೆ. 

ಅರ್ಜಿದಾರರ ವಾದವೇನು?:

ಅರ್ಜಿದಾರರ ಪರ ವಾದಿಸಿದ ವಕೀಲರು, ತಾವು ಸಂಗಾತಿ ಎಂಬ ಪದದ ಬಳಕೆಯನ್ನು ಅಸಂವಿಧಾನಿಕ ಎನ್ನುತ್ತಿಲ್ಲ. ಆದರೆ, ಆ ಪದದ ಪ್ರಸ್ತುತ ಬಳಕೆ ಮತ್ತು ಅನ್ವಯವು ಪರೋಕ್ಷ ತಾರತಮ್ಯಕ್ಕೆ ಕಾರಣವಾಗುತ್ತಿದೆ. ಅರ್ಜಿದಾರರ ನಡುವ ರಕ್ತಸಂಬಂಧವಿಲ್ಲದಿದ್ದರೂ ದಂಪತಿಗಳಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ. "ಸಂಗಾತಿ' ಪದದ ಸೀಮಿತ ವ್ಯಾಖ್ಯಾನವು ಅವರಿಗೆ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸುತ್ತದೆ ಎಂದು ಆಕ್ಷೇಪಣೆ ಸಲ್ಲಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಆ. 4ಕ್ಕೆ ಮುಂದೂಡಿತು.
ℹ️

ಪ್ರಕರಣದ ಹಿನ್ನೆಲೆ 

ಬೆಂಗಳೂರಿನಲ್ಲಿ ನೆಲೆಸಿರುವ ಸಲಿಂಗ ಸಂಗಾತಿಗಳಿಬ್ಬರು ಈ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಒಬ್ಬರು ತಮ್ಮ ಸಂಬಂಧದ ವಾರ್ಷಿಕೋತ್ಸವದ ಅಂಗವಾಗಿ ಇನ್ನೊಬ್ಬರಿಗೆ 1.15 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ತೆರಿಗೆ ವಿನಾಯಿತಿಗೆ ಕೋರಿದ್ದ ಮನವಿಯನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಕೇವಲ ಲೈಂಗಿಕ ದೃಷ್ಟಿಕೋನದ ಆಧಾರದಲ್ಲಿ ತೆರಿಗೆ ವಿನಾಯಿತಿ ನಿರಾಕರಿಸಿರುವುದು ಸಮಾನತೆಯ ಹಕ್ಕಿನ ಉಲ್ಲಂನೆ ಎಂದು ಅವರು ವಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net