ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಸ್ಟಿಂಗ್ ವಿಡಿಯೋ ಎಂಬುದು ಒಂದು ಕಟ್ಟುಕತೆ ಎಂದು ಸ್ವತಃ ಸಿಸಿಬಿ ಇಂದು (ಅ.29) ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕುತೂಹಲ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ತನಿಖೆಯಲ್ಲಿ ಮಹತ್ವದ ಸತ್ಯಾಂಶಗಳು ಹೊರಬಿದ್ದಿವೆ. ಈ ಕುರಿತು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಸುದೀರ್ಘ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ವಿಡಿಯೋದಲ್ಲಿ ಬಿಂಬಿಸಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಸಂಪೂರ್ಣವಾಗಿ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಕಟ್ಟುಕಥೆಯಾಗಿದ್ದು, ಇದರಲ್ಲಿ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲಿ ಚಿತ್ರಿಸಲಾಗಿರುವ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ದೃಢಪಡಿಸುವುದಿಲ್ಲ ಎಂದು ಸಿಸಿಬಿ ಹಾಗೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಗುರುತಿಸಿ ಸಮಗ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ವಿಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಕ್ಷ್ಮವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಕೇವಲ ಸುಳ್ಳು ಮತ್ತು ಕಲ್ಪಿತ ಕಥೆಯಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ.
ಸದರಿ ವಿಡಿಯೋವನ್ನು ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಸೈಬರ್ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ವಿಡಿಯೋದ ನೈಜತೆ, ಸಮಗ್ರತೆ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ದೃಢಪಡಿಸಿಕೊಳ್ಳುವ ಉದ್ದೇಶದಿಂದ ಈ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ (ಎಫ್ಎಸ್ಎಲ್) ಕಳುಹಿಸಲಾಗಿದ್ದು, ಅದರ ವರದಿ ಇನ್ನಷ್ಟೇ ಬರಬೇಕಾಗಿದೆ. 2011ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದ ಈ ವಿಡಿಯೋವನ್ನು ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
12 ವರ್ಷಗಳ ನಂತರ ಕೃತಕವಾಗಿ ಸೃಷ್ಟಿಸಲಾದ ಈ ವಿಡಿಯೋವನ್ನು ಯಾವ ಸಂದರ್ಭದಲ್ಲಿ, ಯಾರ ದುರುದ್ದೇಶಕ್ಕಾಗಿ ಚಿತ್ರೀಕರಿಸಲಾಯಿತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಆಳವಾದ ತನಿಖೆ ಜಾರಿಯಲ್ಲಿದೆ. ತಪ್ಪುದಾರಿಗೆಳೆಯುವ ನಿರೂಪಣೆಯನ್ನು ಸೃಷ್ಟಿಸುವ ಹಾಗೂ ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಪೂರ್ವಯೋಜಿತವಾಗಿ ಈ ವಿಡಿಯೋವನ್ನು ರೂಪಿಸಲಾಗಿದೆಯೇ ಎಂಬ ಅಂಶವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಇದಲ್ಲದೆ, ವಿಡಿಯೋ ಚಿತ್ರೀಕರಣಗೊಂಡ ನಂತರ ಯಾರ ವಶದಲ್ಲಿತ್ತು, ಅಂತಿಮವಾಗಿ 2026ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುಟ್ಯೂಬ್, ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗುವವರೆಗೆ ಇದು ಹೇಗೆ ಹಸ್ತಾಂತರವಾಯಿತು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಗುರುತು ಹಾಗೂ ವಿಳಾಸವನ್ನು ಮರೆಮಾಚಲು ವಿಪಿಎನ್, ನಕಲಿ ಐಪಿ ವಿಳಾಸಗಳು ಮತ್ತು ವರ್ಚುವಲ್ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದ್ದು, ಈ ಡಿಜಿಟಲ್ ಜಾಡುಗಳು ಕರ್ನಾಟಕದ ಹೊರಗಿನ ಸ್ಥಳಗಳೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ.
ವಿಸ್ತೃತ ತಾಂತ್ರಿಕ ವಿಶ್ಲೇಷಣೆಯ ಮೂಲಕ ನವದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಮೊಬೈಲ್ ಫೋನ್ ಖರೀದಿಗೆ ಸಂಬಂಧಿಸಿದಂತೆ ಅಕ್ಟೋಬರ್ 24, 2026ರಂದು ಕಾನೂನುಬದ್ಧವಾಗಿ ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಬಂಧಿತ ಆರೋಪಿಯು ನವದೆಹಲಿಯಲ್ಲಿ ನೆಲೆಸಿರುವ ಫ್ರೀಲ್ಯಾನ್ಸ್ ಕಂಟೆಂಟ್ ಕ್ರಿಯೇಟರ್ ಆಗಿದ್ದು (Freelance Content Creator), ಪ್ರಭಾವಿ ರಾಜಕೀಯ ಸಂಪರ್ಕಗಳನ್ನು ಹೊಂದಿರುವುದು ಕಂಡುಬಂದಿದೆ. ಈ ಸಂಬಂಧಗಳ ಸ್ವರೂಪ ಮತ್ತು ವ್ಯಾಪ್ತಿಯ ಕುರಿತು ವಿಚಾರಣೆ ಕೂಡ ಮುಂದುವರೆದಿದೆ.
ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ತೇಜೋವಧೆ ಮಾಡುವ, ಅವರ ಘನತೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ಮೂಡಿಸುವ ದುರುದ್ದೇಶದಿಂದ ಈ ಸಂಚು ರೂಪಿಸಲಾಗಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ದೃಢಪಟ್ಟಿದೆ. ಈ ಸಂಚಿನಲ್ಲಿ ಭಾಗಿಯಾಗಿರುವ ಹಲವು ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಈಗಾಗಲೇ ಕಾನೂನುಬದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ, ತನಿಖೆಯ ಸಮಗ್ರತೆ ಹಾಗೂ ಸಾಕ್ಷ್ಯಧಾರಗಳ ಹಸ್ತಕ್ಷೇಪ ತಡೆಯಲು ಸದ್ಯಕ್ಕೆ ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಲಾಗಿದೆ.
ಅಂತಿಮವಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು, ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ದೃಢೀಕರಿಸದ ಆರೋಪಗಳನ್ನು ಪ್ರಸಾರ ಮಾಡುವುದು, ಹಂಚಿಕೊಳ್ಳುವುದು ಅಥವಾ ಆತುರದ ತೀರ್ಮಾನಗಳಿಗೆ ಬರುವುದು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವುದಲ್ಲದೆ, ತನಿಖೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.