ಗಣೇಶ ಹಬ್ಬ ಶಾಂತಿಯುತವಾಗಿ ಆಚರಿಸಿ

ರಾಹುಲ್ ಪಾಂಡ್ವೆ
ರಾಹುಲ್ ಪಾಂಡ್ವೆ
Published on
ಯಾದಗಿರಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯಾಗುವವರೆಗೂ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾರ್ವಜನಿಕರು ಗಣೇಶನ ಪ್ರತಿಮೆಯನ್ನು ರಸ್ತೆಯಲ್ಲಿ ಪ್ರತಿಷ್ಠಾಪಿಸಿ ಇತರರಿಗೆ ತೊಂದರೆ ಮಾಡಬಾರದು. ಸಣ್ಣ ಪುಟ್ಟ ಗಣೇಶನ ಪ್ರತಿಮೆ ಹೊರತುಪಡಿಸಿ, ಉಳಿದ ಎಲ್ಲ ಆಯೋಜಕರು ಕಡ್ಡಾಯವಾಗಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಪೊಲೀಸ್ ಇಲಾಖೆ, ಜೆಸ್ಕಾಂ, ನಗರಸಭೆ ಹಾಗೂ ಅಗ್ನಿಶಾಮಕ ದಳದಿಂದ ಪರವಾನಿಗೆ ಪಡೆಯಬೇಕು ಎಂದು ಅವರು ಹೇಳಿದರು.
ಈ ಹಬ್ಬದ ಆಚರಣೆ ನಿಮಿತ್ತ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರನ್ನು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಽಕಾರಿಗಳನ್ನು ಕರೆಸಿ ಶಾಂತಿಸಭೆ ನಡೆಸುವಂತೆ ಜಿಲ್ಲೆಯ ವಿವಿಧ ತಾಲೂಕುಗಳ ತಹಸಿಲ್ದ್ದಾರರಿಗೆ ಸೂಚಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳ ಕುರಿತು ವಿಸ್ತ್ರತವಾಗಿ ಚರ್ಚಿಸಿದರು. ಗಣೇಶ ಪ್ರತಿಷ್ಠಾಪನೆ ಮಾಡುವಾಗ ಯಾವುದೇ ವಿವಾದಾತ್ಮಕ ಸ್ಥಳವನ್ನು ಆಯ್ಕೆ ಮಾಡದಂತೆ ನೋಡಿಕೊಳ್ಳಲು ಸುರಪುರ ವಿಭಾಗದ ಯಾದಗಿರಿ ಪೊಲೀಸ್ ಉಪ ಅಧಿಕ್ಷಕರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಮುಖಂಡರಾದ ಬಾಬು ದೋಕಾ, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾರ, ಮರೆಪ್ಪ ಚಟ್ಟೆರಕರ, ಮಲ್ಲಿಕಾರ್ಜುನ ಶಿರಗೋಳ, ವಾಹಿದಮಿಯಾ, ಸುರೇಶ ಜೈನ್, ಶೇಖ ಇಮಾಮ, ಎಂ.ಡಿ.ಜುನೇದ ಪಾಷಾ ಇತರರಿದ್ದರು.

ಧ್ವನಿವರ್ಧಕ ಬಳಸಲು ಅವಕಾಶ

ಬೆಳಗ್ಗೆ ೬ರಿಂದ ರಾತ್ರಿ ೧೦ರವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದ್ದು, ಮುಸ್ಲಿಂ ಬಾಂಧವರ ಪ್ರಾರ್ಥನೆ ಸಮಯದಲ್ಲಿ ಧ್ವನಿ ತಗ್ಗಿಸಬೇಕು. ನಗರದ ಗಣೇಶ ಮೂರ್ತಿಗಳನ್ನು ದೊಡ್ಡ ಕೆರೆ ಹಾಗೂ ಸಣ್ಣ ಕೆರೆಯ (ಲುಂಬಿನಿ ಪಾರ್ಕ್ ಪಕ್ಕ) ನಿಗದಿತ ಗುಂಡಿಗಳಲ್ಲಿ ವಿಸರ್ಜಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸ್ವಚ್ಛತೆ, ರಸ್ತೆ ದುರಸ್ತಿ, ಬೆಳಕು, ಜೆಸಿಬಿ ಮತ್ತು ಜನರೇಟರ್ ವ್ಯವಸ್ಥೆ ಮಾಡಲು ಪೌರಾಯುಕ್ತರಿಗೆ ಡಿಸಿ ಅವರು ಸೂಚಿಸಿದರು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ೫ ರಿಂದ ೧೦ ಜನರ ಸಮಿತಿ ರಚಿಸಿ ಗುರುತಿನ ಚೀಟಿ ನೀಡಬೇಕು. ಹತ್ತಿರದಲ್ಲಿ ಮಸೀದಿ ಇದ್ದರೆ ಸಮಿತಿಯಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಯನ್ನು ಸೇರಿಸಿಕೊಳ್ಳಲು ಹಾಗೂ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಜಿಲ್ಲಾಽಕಾರಿ ಪಾಂಡ್ವೆ ಹೇಳಿದರು.
ಮೂರು ಬಹುಮಾನಗಳು
ಯಾದಗಿರಿ ನಗರದ ಅತ್ಯುತ್ತಮ ಮೂರು ಗಣೇಶ ಸಮಿತಿಗಳಿಗೆ ಪ್ರಥಮ (೧೫ ಸಾವಿರ ರೂ.), ದ್ವಿತೀಯ (೧೦ಸಾವಿರ ರೂ.) ಹಾಗೂ ತೃತೀಯ (೫ ಸಾವಿರ ರೂ.) ಬಹುಮಾನವನ್ನು ನ.೧ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾವೈಕ್ಯತೆ ಸಮಿತಿಯಿಂದ ವಿತರಿಸಲಾಗುವುದು. ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಚಂದಾ, ದೇಣಿಗೆ ಸಂಗ್ರಹಿಸುವುದನ್ನು ನಿಷೇಽಸಲಾಗಿದೆ. ಶಬ್ಧ ಮತ್ತು ಪಟಾಕಿ ಮಾಲಿನ್ಯವನ್ನು ತಡೆಯಲು ಹಾಗೂ ಪ್ಲಾಸ್ಟಿಕ್ ವಸ್ತು ಬಳಸದಂತೆ ಸೂಚಿಸಿದರು.
ಅರ್ಥಪೂರ್ಣ ಆಚರಣೆ ಸೂಚನೆ
ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವ ದಿನ ಸೆ.೧೭ ರಂದು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಕಾರಿ ರಾಹುಲ್ ಪಾಂಡ್ವೆ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಕಳೆದ ಬುಧವಾರ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ ೮ಕ್ಕೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಲಿದ್ದು, ಬೆಳಗ್ಗೆ ೯ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಮುಖ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net