ವಾಲ್ಮೀಕಿ ಹಗರಣದ ತನಿಖೆಗೆ ಸಹಕರಿಸುತ್ತಿಲ್ಲ ಎಂದ ಸಿಬಿಐ| High court

B Nagendra
B Nagendra
Published on
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಮತ್ತು ಟೆಂಡರ್​ ಅಕ್ರಮಗಳ ಆರೋಪದಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಆರೋಪಿಗಳು ಸಹಕರಿಸುತ್ತಿಲ್ಲ ಎಂದು ಹೈಕೋರ್ಟ್​ಗೆ ಸಿಬಿಐ ತಿಳಿಸಿದೆ.
ಮಾಜಿ ಸಚಿವ ಬಿ. ನಾಗೇಂದ್ರಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಕೋರಿ ಸಿಬಿಐ ಸಲ್ಲಿಸಿರುವ ಅರ್ಜಿ ಮತ್ತು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನೆಕ್ಕುಂಟಿ ನಾಗರಾಜ್​ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ನಡೆಸಿತು. 
ಸಿಬಿಐ ಪರ ವಾದಿಸಿದ ವಕೀಲರು, ಹಣ ವರ್ಗಾವಣೆಗಳ ಬಗ್ಗೆ ಸರಿಯಾದ ವಿವರಣೆಯನ್ನು ನಾಗೇಂದ್ರ ನೀಡಿಲ್ಲ. ಅವರ ಖಾತೆಯಿಂದ 2.50 ಕೋಟಿ ರೂಪಾಯಿ ಹಣ ಮುಂಬೈನ ಮಹಿಳೆಯೊಬ್ಬರ ಖಾತೆಗೆ ವರ್ಗಾವಣೆಯಾಗಿದೆ. ಅವರು ತನ್ನನ್ನು ನಾಗೇಂದ್ರ ಅವರ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಈ ಹಣ ವರ್ಗಾವಣೆ ಬಗ್ಗೆ ಸೂಕ್ತ ವಿವರಣೆಯನ್ನು ನೀಡಿಲ್ಲ. ಮೊಬೈಲ್​ನಲ್ಲಿ ಕೆಲವೊಂದು ಹಣ ಎಣಿಕೆಯ ವಿಡಿಯೋಗಳು ಪತ್ತೆಯಾಗಿವೆ. ಆ ಬಗ್ಗೆಯೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ, ಅವರ ಜಾಮೀನು ರದ್ದುಗೊಳಿಸಿ ಕಸ್ಟಡಿಗೆ ನೀಡಬೇಕು ಎಂದು ವಾದಿಸಿದರು. ನಾಗೇಂದ್ರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದಾರೆ.
ಅದೇ ರೀತಿ ಇನ್ನೊಬ್ಬ ಆರೋಪಿಯಾದ ನೆಕ್ಕುಂಟಿ ನಾಗರಾಜ್​ ಸಹ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಸಿಬಿಐ ಪರ ವಕೀಲರು ಆರೋಪಿಸಿದರು. ಆಗ ಪ್ರತಿಕ್ರಿಯಿಸಿದ ನ್ಯಾಯಪೀಠ, ಆರೋಪಿಯು ಸಿಬಿಐ ತನಿಖೆಗೆ ಸಹಕರಿಸಬೇಕು. ಜೂ. 23ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತು. ತನಿಖೆಗೆ ಸಹಕಾರ ನೀಡಿಲ್ಲವಾದರೆ ಕಸ್ಟಡಿಗೆ ನೀಡಲಾಗುವುದು ಎಂದು ಎಚ್ಚರಿಸಿತು. ಅಂತಿಮವಾಗಿ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net