ಕ್ಷಮಾ ರಹಿತ ಶಿಕ್ಷೆ ನೀಡಿ ಎಂದ ಸಿಬಿಐ: ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ವಿನಯ್​ ಕುಲಕರ್ಣಿ; ನಾಳೆ ತೀರ್ಪು ನೀಡಲಿರುವ ನ್ಯಾಯಾಲಯ! Vinay Kulkarni

ನಾನು ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ವಿನಯ್​ ಕುಲಕರ್ಣಿ
ನಾನು ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ವಿನಯ್​ ಕುಲಕರ್ಣಿ
Published on

ಪ್ರಮುಖ ಮುಖ್ಯಾಂಶಗಳು

  • ಯೋಗೇಶ್ ಗೌಡ ಕೊಲೆ ಪ್ರಕರಣ
  • ಅಪರಾಧಿಗಳಿಗೆ ಕ್ಷಮಾರಹಿತ ಶಿಕ್ಷೆ ನೀಡಿ ಎಂದ ಸಿಬಿಐ
  • ನಾನು ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ವಿನಯ್​ ಕುಲಕರ್ಣಿ
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ (Vinay Kulkarni) ಸೇರಿ 16 ಜನರಿಗೆ ಕ್ಷಮಾದಾನ ರಹಿತ ಶಿಕ್ಷೆ ನೀಡಬೇಕೆಂದು ಸಿಬಿಐ ಮನವಿ ಮಾಡಿದ್ದು, ಆದೇಶವನ್ನು ನಾಳೆ (ಏ.17) ಪ್ರಕಟಿಸುವುದಾಗಿ ಜನ ಪ್ರತಿ ನಿಧಿಗಳ ನ್ಯಾಯಾಲಯ ತಿಳಿಸಿದೆ.
ನಿನ್ನೆ (ಬುಧವಾರ,ಏ.15) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್​ ಕುಲಕರ್ಣಿ ಸೇರಿ 16 ಜನರು ಆರೋಪಿಗಳೆಂದು ಹೇಳಿದ್ದ ನ್ಯಾಯಾಲಯ ಇಂದು (ಏ.16) ಶಿಕ್ಷೆ ಪ್ರಮಾಣವನ್ನು ನಿರ್ಧರಿಸುವುದಾಗಿ ಹೇಳಿತ್ತು. ಇಂದು, ಸಿಬಿಐ ಮತ್ತು ವಿನಯ್​ ಕುಲಕರ್ಣಿ ಅವರ ಮಾತನ್ನು ಆಲಿಸಿದ ನ್ಯಾಯಮೂರ್ತಿ ಸಂತೋಷ್​ ಗಜಾನನ್ ಭಟ್​ ಅವರು ನಾಳೆ ತೀರ್ಪು ಪ್ರಕಟಿಸುವುದಾಗಿ ಹೇಳಿದರು.
ತನಿಖಾ ಸಂಸ್ಥೆ ಸಿಬಿಐನನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನಾವು ಕೋರುವುದಿಲ್ಲ. ಬದಲಿಗೆ ಕ್ಷಮಾದಾನವಿಲ್ಲದ ಜೀವನ ಪರ್ಯಂತ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಕ್ಷಮೆರಹಿತ ಶಿಕ್ಷೆ ನೀಡಿ!

ಸಂತ್ರಸ್ತನಾದ ಯೋಗೀಶ್‌ ಗೌಡನ ಕಣ್ಣಿಗೆ ಖಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ (Rarest of the Rare) ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ಹಾಗೆಯೇ ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಅವರು ಕೋರಿದರು.

ನಾನ್ಯಾರಿಗೂ ಅನ್ಯಾಯ ಮಾಡಿಲ್ಲ

ನಂತರ ವಿನಯ್​ ಕುಲಕರ್ಣಿ ಪರ ವಕೀಲ ಎಂ.ಎಸ್‌.ಶ್ಯಾಮ್‌ಸುಂದರ್‌, ವಿನಯ್​ ಕುಲಕರ್ಣಿ ಜನರ ವಿಶ್ವಾಸವನ್ನು ಗೆದ್ದಿರುವ ಶಾಸಕರಾಗಿದ್ದಾರೆ, ಅವರಿಗೆ 3 ಮಕ್ಕಳಿದ್ದಾರೆ, ಸುಮಾರು 3500 ಹಸು ಎಮ್ಮೆಗಳಿವೆ. ಈ ಪ್ರಕರಣದಲ್ಲಿ ಅವರನ್ನು ರಾಜಕೀಯ ದುರುದ್ದೇಶದಿಂದ ಸಿಲುಕಿಸಿದ್ದಾರೆ. ದಯಮಾಡಿ ಇವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು.
ನಂತರ ನ್ಯಾಯಾಧೀಶರ ಮುಂದೆ ಮಾತನಾಡಿದ ಶಾಸಕ ವಿನಯ್​ ಕುಲಕರ್ಣಿ, ನಾನು 27 ವರ್ಷದಿಂದ ರಾಜಕೀಯ ಮಾಡುತ್ತಿದ್ದನೆ. ಇಲ್ಲಿವರೆಗೆ ಯಾರಿಗೂ ಅನ್ಯಾಯ ಮಾಡಿಲ್ಲ, ರಾಜಕೀಯ ಪ್ರತೀಕಾರಕ್ಕಾಗಿ ನನ್ನ ಮೇಲೆ ಪಿತೂರಿ ಮಾಡಲಾಗಿದೆ.
ನನಗೆ ಮೂರು ಜನ ಮಕ್ಕಳಿದ್ದಾರೆ, ಅವರು ಈಗ ಮದುವೆ ವಯಸ್ಸಿಗೆ ಬಂದಿದ್ದಾರೆ. ನನ್ನ ಬಳಿ 3500 ಹಸು, ಎಮ್ಮೆಗಳಿವೆ. ನಾನು ಮೂರು ಭಾರಿ ಶಾಸಕನಾಗಿದ್ದೇನೆ, ಒಂದು ಸಹ ಮಂತ್ರಿಯಾಗಿದ್ದೇನೆ. ಈಗ ನನಗೆ ಶಿಕ್ಷೆಯಾದರೆ ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ ನನಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಕೇಳಿಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net