ಬೆಂಗಳೂರು ಮಳೆಯನ್ನು ಇನ್ನು ರೊಮ್ಯಾಂಟಿಕ್​ ಆಗಿ ನೋಡಕ್ಕಾಗಲ್ಲ ಬ್ರೋ'; ಇಂದಿರಾನಗರ ರಸ್ತೆ ಜಲಾವೃತ, ಟ್ರಾಫಿಕ್ ಬಗ್ಗೆ ವಾಹನ ಸವಾರ ಬೇಸರ..Bengaluru Rain

Bengaluru Rain Effects
Bengaluru Rain Effects
Published on

ಪ್ರಮುಖ ಮುಖ್ಯಾಂಶಗಳು

  • ​ಕೇವಲ 10 ನಿಮಿಷಗಳ ಕಾಲ ಸುರಿದ ಮಳೆಗೆ ಕೆರೆಯಂತಾ ಇಂದಿರಾ ನಗರದ ರಸ್ತೆಗಳು
  • ​'ಬೆಂಗಳೂರು ಮಳೆಯನ್ನು ಇನ್ನು ರೊಮ್ಯಾಂಟಿಕ್ ಆಗಿ ನೋಡಲು ಸಾಧ್ಯವಿಲ್ಲ' ಎಂದು 'ಎಕ್ಸ್' ನಲ್ಲಿ ಪೋಸ್ಟ್
  • ಕಳಪೆ ಒಳಚರಂಡಿ ವ್ಯವಸ್ಥೆ ಮತ್ತು ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಅಭಿವೃದ್ಧಿ ವೈಫಲ್ಯದ ಬಗ್ಗೆ ನೆಟ್ಟಿಗರು ಕಿಡಿ
ಬೆಂಗಳೂರು: ಬೇಸಿಗೆಯಿಂದ ಕಂಗೆಟ್ಟ ಜನರು ಬೆಂಗಳೂರಲ್ಲಿ‌ ಮೊದಲ‌ ಮತ್ತು ನಂತರದ‌ ಮಳೆ(Bengaluru Rain) ಕಂಡು ರೀಲ್ಸ್....ವಾಟ್ಸಾಪ್ ಸ್ಟೇಟಸ್, ಶಾರ್ಟ್ಸ್​​ಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದರು. ಇನ್ನೂ ಕೆಲವರು ಮಳೆಯಲ್ಲಿ ನೆಂದು ಸಂಭ್ರಮಿಸಿದರು. ಆದರೆ, ಈ ನಡುವೆ ಇಲ್ಲಿನ ನಿವಾಸಿಯೊಬ್ಬರು ಸಿಲಿಕಾನ್​ ಸಿಟಿ ಮಳೆಯನ್ನು ಇನ್ನು ನನಗೆ ರೊಮ್ಯಾಂಟಿಕ್ ಆಗಿ ನೋಡೋಕೆ ನನ್ನಿಂದ ಸಾಧ್ಯವಿಲ್ಲ ಎನ್ನುತ್ತ ಬಿಚ್ಚಿಟ್ಟಿರುವ ಸತ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಹೌದು, ಬೆಂಗಳೂರಿನಲ್ಲಿ ಈಗೀಗ ಸಂಜೆಯಾಗುತ್ತಲೇ ಮಳೆಯಾಗುತ್ತಿದೆ. ಅರ್ಧಗಂಟೆ ಅಥವಾ ಹತ್ತು ನಿಮಿಷ ಧೋ ಎ‌ಂದು ಸುರಿಯುವ ಮಳೆ ಇಲ್ಲಿನ ರಸ್ತೆಗಳನ್ನು ಕೆರೆಯಂತೆ ಮಾಡುತ್ತಿದೆ. ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಹತ್ತು ನಿಮಿಷದಲ್ಲಿ ಮನೆ ತಲುಪುವವರು ಅರ್ಧಗಂಟೆ ಕಳೆದರೂ ರಸ್ತೆಯಲ್ಲೇ ನಿಂತಿರುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಇಂದಿರಾನಗರದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರೊಬ್ಬರು ಇಲ್ಲಿನ ಅವ್ಯವಸ್ಥೆ ಬಗ್ಗೆ '​ರೆಡ್ಡಿಟ್​' ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ...

ವಾಹನ ಸವಾರ ಹೇಳಿದ್ದು ಹೀಗೆ

​ನಗರದ ಅತ್ಯಂತ ಪ್ರತಿಷ್ಠಿತ ಮತ್ತು ದುಬಾರಿ ವಸತಿ ಪ್ರದೇಶಗಳಲ್ಲಿ ಒಂದಾದ ಇಂದಿರಾನಗರದ 12ನೇ ಮುಖ್ಯ ರಸ್ತೆ ಕೇವಲ 10 ನಿಮಿಷ ಸುರಿದ ಮಳೆಗೆ ಹೇಗೆ ಜಲಾವೃತಗೊಳ್ಳುತ್ತಿದೆ. ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ, ಒಳ ಚರಂಡಿ ವ್ಯವಸ್ಥೆ ಅಧ್ವಾನವಾಗಿದೆ ಎಂದು ಬರೆದುಕೊಂಡಿದ್ದಾರೆ.
'ಇಲ್ಲ ಗುರು ಇನ್ನು ಬೆಂಗಳೂರು ಮಳೆಯನ್ನು ನಾನು ರೊಮ್ಯಾಂಟಿಕ್ ಆಗಿ ನೋಡಲು ಸಾಧ್ಯವಿಲ್ಲ. ಕೇವಲ 10 ನಿಮಿಷಗಳ ಮಳೆಗೆ ಇಂದಿರಾನಗರದ 12ನೇ ಮುಖ್ಯ ರಸ್ತೆಯ ಸ್ಥಿತಿ ಹೀಗಾಗಿದೆ. ಈ ರಸ್ತೆಯಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಿವಾಸಿಯ ರೆಡ್ಡಿಟ್ ಪೋಸ್ಟ್

ನೆಟ್ಟಿಗರು ಏನಂದ್ರು?

​ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇತರ ಬೆಂಗಳೂರಿಗರು ಕೂಡ ನಗರದ ಮೂಲಸೌಕರ್ಯ ಹಾಗೂ ಕಳಪೆ ಒಳಚರಂಡಿ ವ್ಯವಸ್ಥೆಯ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖ ವಾಣಿಜ್ಯ ಮತ್ತು ವಸತಿ ಕೇಂದ್ರವಾಗಿರುವ ಇಂದಿರಾನಗರದಲ್ಲೇ ಈ ಪರಿಸ್ಥಿತಿ ಇದ್ದರೆ, ಇನ್ನುಳಿದ ಉಪನಗರಗಳ ಗತಿ ಏನು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಗ್ಗೆ ಕಿಡಿಕಾರುತ್ತಿದ್ದಾರೆ.
ಕಳಪೆ ನಗರಾಭಿವೃದ್ಧಿ ಯೋಜನೆಗಳು ಮತ್ತು ಕಸದ ಸರಿಯಾದ ವಿಲೇವಾರಿ ಇಲ್ಲದಿರುವುದರಿಂದ ಒಳಚರಂಡಿಗಳು ಬ್ಲಾಕ್ ಆಗುತ್ತಿವೆ. ಇದುವೇ ಪ್ರವಾಹಕ್ಕೆ ಪ್ರಮುಖ ಕಾರಣ" ಎಂದು ದೂರಿದ್ದಾರೆ. ಸಿಲಿಕಾನ್ ಸಿಟಿಯ ಐಷಾರಾಮಿ ಪ್ರದೇಶಗಳಲ್ಲೇ ಮಳೆನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ನಾಗರಿಕರ ಆತಂಕವನ್ನು ಹೆಚ್ಚಿಸಿದೆ ಎಂದು ಹೇಳಿಕೊಂಡಿದ್ದಾರೆ. ಮುಂಗಾರಿಗೂ ಮುನ್ನವೇ ಬೆಂಗಳೂರಿನಲ್ಲಿ ಇಂತಹ ಅವಾಂತರ ಸೃಷ್ಟಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ ಪರಿಸ್ಥಿತಿ ಏನು ಎನ್ನುವದರ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net