ಕೆಎಎಸ್ ಮೇನ್ಸ್ ಫಲಿತಾಂಶದ ವಿರುದ್ಧ ಅಭ್ಯರ್ಥಿಗಳು ಗರಂ: ತನಿಖೆಗೆ ಆಗ್ರಹ

ಕೆಎಎಸ್ ಮೇನ್ಸ್ ಫಲಿತಾಂಶ
ಕೆಎಎಸ್ ಮೇನ್ಸ್ ಫಲಿತಾಂಶ
Published on

ಪ್ರಮುಖ ಮುಖ್ಯಾಂಶಗಳು

  • ಈ ಫಲಿತಾಂಶವು ಹಗಲು ದರೋಡೆಯಾಗಿದ್ದು, ಸಮಗ್ರ ತನಿಖೆ ನಡೆಸಬೇಕು. ಮುಂಬರುವ ಯಾವುದೇ ನೇಮಕಾತಿಯನ್ನು ಕೆಪಿಎಸ್‌ಸಿಗೆ ನೀಡಬಾರದು ಎಂದು ಅಭ್ಯರ್ಥಿಗಳು ತೀವ್ರ ಆಕ್ರೋಶ
  • ಒಂದು ವೇಳೆ ಅವರೆಲ್ಲರೂ ನೈಜ ಅಭ್ಯರ್ಥಿಗಳೇ ಆಗಿದ್ದಲ್ಲಿ ಅವರೆಲ್ಲರ ಉತ್ತರ ಪತ್ರಿಕೆಗಳ ಪ್ರತಿಯನ್ನು ಎಲ್ಲರಿಗೂ ಸಿಗುವಂತೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.
  • ಕೆಪಿಎಸ್‌ಸಿ ಈ ಹಿಂದೆ ನಡೆಸಿದ ಪಿಡಿಒ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ. ಒಂದೇ ಊರಿನ ಐದು ಮಂದಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ಸ್‌ (ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳು) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಒಂದೇ ಬ್ಲಾಕ್‌ನ ಹತ್ತಾರು ಅಭ್ಯರ್ಥಿಗಳು ರ‌್ಯಾಂಕ್ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಕೂಡಲೇತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಫಲಿತಾಂಶವು ಹಗಲು ದರೋಡೆಯಾಗಿದ್ದು, ಸಮಗ್ರ ತನಿಖೆ ನಡೆಸಬೇಕು. ಮುಂಬರುವ ಯಾವುದೇ ನೇಮಕಾತಿಯನ್ನು ಕೆಪಿಎಸ್‌ಸಿಗೆ ನೀಡಬಾರದು ಎಂದು ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಅವರೆಲ್ಲರೂ ನೈಜ ಅಭ್ಯರ್ಥಿಗಳೇ ಆಗಿದ್ದಲ್ಲಿ ಅವರೆಲ್ಲರ ಉತ್ತರ ಪತ್ರಿಕೆಗಳ ಪ್ರತಿಯನ್ನು ಎಲ್ಲರಿಗೂ ಸಿಗುವಂತೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅವರು ತೆಗೆದುಕೊಂಡಿರುವ ಮಾಧ್ಯಮವನ್ನು ಕೂಡ ತಿಳಿಸಬೇಕು. ಇಲ್ಲವಾದಲ್ಲಿ ಉಳಿದ ಅಭ್ಯರ್ಥಿಗಳಿಗೆ ವಿಶೇಷವಾಗಿ ಕನ್ನಡ ಮಾಧ್ಯಮದವರಿಗೆ ಅನ್ಯಾಯವಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಇದರ ವಿರುದ್ಧ ಹೋರಾಟವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಪಾಯಕಾರಿ ಸನ್ನಿವೇಶಗಳು ಎದುರಾಗಲಿವೆ. ಈಗಾಗಲೇ ಕೆಪಿಎಸ್‌ಸಿ ಮಹಾನ್ ಭ್ರಷ್ಟಾಚಾರದ ಮಸಿಯನ್ನು ಮೆತ್ತುಕೊಂಡಿದೆ. ಇದಕ್ಕೆ ಕೆಎಎಸ್ ಪರೀಕ್ಷೆ ಮತ್ತೊಂದು ಸೇರ್ಪಡೆಯಾಗಿದೆ ಅಷ್ಟೇ ಎಂದು ತೀವ್ರ ಬೇಸರ ತೋಡಿಕೊಂಡಿದ್ದಾರೆ.

ಪಿಡಿಒ ನೇಮಕಾತಿಯಲ್ಲಿಯೂ ಅಕ್ರಮ ಆರೋಪ:

ಕೆಪಿಎಸ್‌ಸಿ ಈ ಹಿಂದೆ ನಡೆಸಿದ ಪಿಡಿಒ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ. ಒಂದೇ ಊರಿನ ಐದು ಮಂದಿ ಆಯ್ಕೆಯಾಗಿದ್ದಾರೆ. ದುರಾದೃಷ್ಟವೆಂದರೆ ಅವರಿಗೆ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಗೊತ್ತಿಲ್ಲ. ಮೆಂಟಲ್ ಎಬಿಲಿಟಿ ಕೂಡ ಅಷ್ಟಕಷ್ಟೇ. ಹೀಗಿದ್ದರೂ ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ ಎಂದು ಅಭ್ಯರ್ಥಿಗಳು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಸರಣಿ ಪಟ್ಟಿ ವಿರುದ್ಧ ಹೋರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಯೋಜನೆ ರೂಪಿಸಿ ಶೀಘ್ರವೇ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭಿಸುತ್ತೇವೆ. ಒಂದು ವೇಳೆ ಅವರೆಲ್ಲರೂ ನೈಜ ಅಭ್ಯರ್ಥಿಗಳಾಗಿದ್ದಲ್ಲಿ ಅವರೆಲ್ಲರ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
- ಕಾಂತಕುಮಾರ್, ಎಕೆಎಸ್‌ಎಸ್‌ಎ ಸಂಘಟನೆ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net