ಕೊನೇ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಭಾರಿ ಬದಲಾವಣೆ: ಮಲ್ಲಿಕಾರ್ಜುನ್​, ಬೋಸರಾಜುಗೆ ಲಕ್​, ಮಹಿಳೆಯರಿಗಿಲ್ಲ ಒಂದೂ ಸ್ಥಾನ! Cabinet Expansion

ಕೊನೇ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಭಾರಿ ಬದಲಾವಣೆ: ಮಲ್ಲಿಕಾರ್ಜುನ್​, ಬೋಸರಾಜುಗೆ ಲಕ್​, ಮಹಿಳೆಯರಿಗಿಲ್ಲ ಒಂದೂ ಸ್ಥಾನ! Cabinet Expansion
ಕೊನೇ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಭಾರಿ ಬದಲಾವಣೆ: ಮಲ್ಲಿಕಾರ್ಜುನ್​, ಬೋಸರಾಜುಗೆ ಲಕ್​, ಮಹಿಳೆಯರಿಗಿಲ್ಲ ಒಂದೂ ಸ್ಥಾನ! Cabinet Expansion
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಅಂತಿಮ ಸಂಪುಟ ಪಟ್ಟಿಯಲ್ಲಿ ಓರ್ವ ಮಹಿಳೆಗೆ ಕೂಡ ಸ್ಥಾನ ಸಿಕ್ಕಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ
  • ಕೊನೇ ಕ್ಷಣದಲ್ಲಿ ಮಂಕಾಳ ವೈದ್ಯ ಹಾಗೂ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಟ್ಟು ಮಲ್ಲಿಕಾರ್ಜುನ್ ಹಾಗೂ ಬೋಸರಾಜುಗೆ ಸಚಿವ ಸ್ಥಾನ
  • ಸಂಪುಟ ವಿಸ್ತರಣೆಯ ಕೊನೇ ಕ್ಷಣದ ಗೊಂದಲದಿಂದಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಮಯವನ್ನು ಸಂಜೆ ನಾಲ್ಕರಿಂದ ಐದು ಗಂಟೆಗೆ ಮುಂದೂಡಿಕೆ
  • 20 ಸಚಿವರ ಪಟ್ಟಿ ಅಂತಿಮವಾಗಿದ್ದರು ಕೂಡ ಕಾಂಗ್ರೆಸ್​ ಪಾಳಯದಲ್ಲಿ ಮಾತ್ರ ಗೊಂದಲು ಇನ್ನೂ ಮುಗಿದಿಲ್ಲ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ನೂತನ ಸಚಿವರು ಯಾರೆಂಬ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಇಂದು ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಲ್ಲಿ ( Cabinet Expansion  ) ಮಹತ್ವದ ಬಲಾವಣೆಗಳು ನಡೆದಿವೆ.
ಆರಂಭದಲ್ಲಿ ಎಐಸಿಸಿ ಬಿಡುಗಡೆ ಮಾಡಿದ 20 ಸಚಿವರ ಪಟ್ಟಿಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನ ಪರಿಷತ್​ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ, ಕೊನೇ ಕ್ಷಣದಲ್ಲಿ ಟ್ವಿಸ್ಟ್​ ಎನ್ನುವಂತೆ ಮಂಕಾಳ ವೈದ್ಯರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಸ್​. ಎಸ್​. ಮಲ್ಲಿಕಾರ್ಜುನ್​ ಅವರಿಗೆ ಹಾಗೂ ಗಾಯತ್ರಿ ಅವರ ಸ್ಥಾನವನ್ನು ಮಾಜಿ ಸಚಿವ ಎನ್​.ಎಸ್​. ಬೋಸರಾಜು ಅವರಿಗೆ ನೀಡಲಾಗಿದೆ. ಇದರಿಂದ ಸಚಿವ ಸ್ಥಾನದ ಆಸೆಯಲ್ಲಿದ್ದ ಮಂಕಾಳ ವೈದ್ಯ ಹಾಗೂ ಗಾಯತ್ರಿ ಅವರಿಗೆ ಭಾರಿ ನಿರಾಸೆ ಉಂಟಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ, 20 ಸಚಿವರ ಪಟ್ಟಿಯಲ್ಲಿ ಓರ್ವ ಮಹಿಳೆಯ ಹೆಸರೂ ಇಲ್ಲ. ಕಾಂಗ್ರೆಸ್​ ಹೈಕಮಾಂಡ್​ನ ಈ ನಡೆ ಮಹಿಳೆಯರ ಆಕ್ರೋಶಕ್ಕೆ ಗುರಿಯಾದರೆ ಅಚ್ಚರಿಪಡಬೇಕಿಲ್ಲ. ಗಾಯತ್ರಿ ಶಾಂತೇಗೌಡ ಅವರ ಬದಲು ಉಮಾಶ್ರೀ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಹೈಕಮಾಂಡ್​ ಬೋಸರಾಜು ಅವರಿಗೆ ಮಣೆ ಹಾಕಿದೆ. 20 ಸಚಿವರ ಪಟ್ಟಿ ಅಂತಿಮವಾಗಿದ್ದರು ಕೂಡ ಕಾಂಗ್ರೆಸ್​ ಪಾಳಯದಲ್ಲಿ ಮಾತ್ರ ಗೊಂದಲು ಇನ್ನೂ ಹಾಗೇ ಮುಂದುವರಿದಿದೆ. ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಸಚಿವರು ಯಾರ್ಯಾರು ಅನ್ನೋದನ್ನು ಅಧಿಕೃತವಾಗಿ ಹೇಳಲಾಗದಂತಹ ಪರಿಸ್ಥಿತಿ ಸದ್ಯ ಕಾಂಗ್ರೆಸ್​ ವಲಯದಲ್ಲಿ ನಿರ್ಮಾಣವಾಗಿದೆ.

ನೂತನ ಸಚಿವರ ಅಂತಿಮ ಪಟ್ಟಿ

1.  ಪಿ.ಎಂ.ನರೇಂದ್ರಸ್ವಾಮಿ
2. ಶಿವರಾಜ್ ತಂಗಡಗಿ
3. ರುದ್ರಪ್ಪ ಲಮಾಣಿ
4. ಕೆ.ಎಸ್.ಬಸವಂತಪ್ಪ
5. ಬಿ.ನಾಗೇಂದ್ರ
6. ಟಿ.ರಘುಮೂರ್ತಿ
7. B. Z. ಜಮೀರ್ ಅಹಮದ್ ಖಾನ್
8. ರಿಜ್ವಾನ್ ಅರ್ಷದ್
9. ಸಂತೋಷ್ ಲಾಡ್
10. ಮಧು ಬಂಗಾರಪ್ಪ
11. ಪುಟ್ಟರಂಗಶೆಟ್ಟಿ
12. ಎಸ್​.ಎಸ್​. ಮಲ್ಲಿಕಾರ್ಜುನ್​ ( ಆರಂಭದಲ್ಲಿ ಮಂಕಾಳ ವೈದ್ಯರ ಹೆಸರಿತ್ತು)
13. ಡಾ. ಅಜಯ್ ಸಿಂಗ್
14. ಎನ್. ಚಲುವರಾಯ ಸ್ವಾಮಿ
15. ಕೆ.ಎಂ.ಶಿವಲಿಂಗೇಗೌಡ
16. ಎಚ್.ಸಿ.ಬಾಲಕೃಷ್ಣ
17. ಬೋಸರಾಜು ( ಆರಂಭದಲ್ಲಿ ಶ್ರೀಮತಿ. ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು)
18. ಬಸವರಾಜ ರಾಯರೆಡ್ಡಿ
19. ವಿಜಯಾನಂದ ಕಾಶಪ್ಪನವರ್
20. ಲಕ್ಷ್ಮಣ ಸವದಿ

ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಇಂದು ಸಂಜೆ 4 ಗಂಟೆಗೆ ನಡೆಯಬೇಕಿತ್ತು. ಆದರೆ, ಕೊನೇ ಕ್ಷಣದವರಿಗೆ ಸಂಪುಟ ವಿಸ್ತರಣೆಯಲ್ಲಿ ಗೊಂದಲ ಉಂಟಾದ್ದರಿಂದ ಪದಗ್ರಹಣ ಸಮಾರಂಭವನ್ನು 4 ಗಂಟೆಯ ಬದಲಿಗೆ 5 ಗಂಟೆಗೆ ಮುಂದೂಡಲಾಗಿದೆ. ಸದ್ಯ ರಾಜಭವನದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸದ್ಯಕ್ಕೆ ನೂತನ ಸಚಿವರು ಯಾರೆಂದು ತಿಳಿದಿದ್ದು, ಇನ್ನೂ ಯಾರಿಗೆ ಯಾವ ಖಾತೆ ಎಂಬ ಸಸ್ಪೆನ್ಸ್​ ಮಾತ್ರ ಹಾಗೇ ಉಳಿದಿದೆ. 

ಇದೇ ವೇಳೆ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಹಾಗೂ ಪೊನ್ನಣ್ಣ ಅವರಿಗೆ ಉಪ ಸಭಾಧ್ಯಕ್ಷ ಸ್ಥಾನ ಒಲಿದಿದೆ. ಇನ್ನೂ ವಿಧಾನ ಪರಿಷತ್​ನ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಈ  ಬಾರಿ ಮಾಜಿ ಸಚಿವೆ ಲಕ್ವ್ಮೀ ಹೆಬ್ಬಾಳ್ಕರ್ ಹಾಗೂ ಎಂ.ಸಿ .ಸುಧಾಕರ್​ ಅವರಿಗೆ ಭಾರಿ ನಿರಾಸೆ ಉಂಟಾಗಿದೆ. ಇನ್ನೂ ಜೆಡಿಎಸ್​ ಬಿಟ್ಟು ಕಾಂಗ್ರೆಸ್ ಸೇರಿದ ಕೆ.ಎಂ.ಶಿವಲಿಂಗೇಗೌಡರಿಗೆ ಕೊನೆಗೂ ಸಚಿವ ಸ್ಥಾನ ಒಲಿದಿದೆ. 
ಜೂನ್ 3 ರಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಚರ್ಚೆಯಲ್ಲಿದ್ದ ಈ ಸಂಪುಟ ವಿಸ್ತರಣೆಯು ಜುಲೈ 31 ರಂದು ನಡೆಯಬೇಕಿತ್ತು, ಆದರೆ ದೆಹಲಿಯಲ್ಲಿ ನಡೆದ ನಾಯಕರ ಸಭೆಯ ಬಳಿಕ ಇದು ಇಂದಿಗೆ ಮುಂದೂಡಲ್ಪಟ್ಟಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಬಿ.ಕೆ. ಹರಿಪ್ರಸಾದ್ ಅವರು ಈ ಸಂಪುಟ ವಿಸ್ತರಣೆಯ ಸಮಾಲೋಚನಾ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net