ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಅಮೆರಿಕದ ಶಿಕಾಗೋ ನಿವಾಸಿ ಹಾಗೂ ಲೇಖಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಪುಸ್ತಕ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅವರು ನೀಡಿರುವ ಸಂದರ್ಶನಗಳು ಸದ್ಯ ಕರ್ನಾಟಕದಲ್ಲಿ ತೀವ್ರ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. ಭಾರಿ ವಿವಾದ ಸೃಷ್ಟಿಸಿರುವ ಈ ವಿಚಾರ ಕುರಿತಂತೆ ಇದೀಗ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದು ಕರ್ನಾಟಕಕ್ಕೆ ಆಗಿರುವ ದೊಡ್ಡ ಅಗೌರವ. ಬಸವಣ್ಣ ಅವರು ಸಾಂಸ್ಕೃತಿಕ ನಾಯಕ ಅಂತ ಅವರ ಪ್ರತಿಯೊಂದು ವಿಚಾರವನ್ನು ಸರ್ಕಾರಗಳು ಅಳವಡಿಸಿಕೊಳ್ಳುತ್ತಿವೆ. ಅವರ ಹೆಜ್ಜೆ ಗುರುತು ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಅದಕ್ಕೆ ದೆಹಲಿಯಲ್ಲಿ ಅವರ ಪ್ರತಿಮೆಯನ್ನು ರೂಪಿಸಲಾಗಿದೆ. ಪ್ರತಿಯೊಂದು ಊರು, ಮನೆ ಹಾಗೂ ಶಾಲಾ ಕಚೇರಿಗಳಲ್ಲಿ ಅವರ ಆಚಾರ-ವಿಚಾರಗಳನ್ನು ಜನ ಮನದಟ್ಟು ಮಾಡಿಕೊಂಡಿದ್ದಾರೆ ಎಂದರು.
ಬಸವಣ್ಣನವರ ಆಡಳಿತ, ಅವರ ಭಾವಚಿತ್ರ ಎಲ್ಲವನ್ನೂ ಸ್ಮರಿಸಿಕೊಂಡು, ಅವರ ಮಾರ್ಗದರ್ಶನದಂತೆ ಹೆಜ್ಜೆ ಹಾಕುತ್ತಿದ್ದೇವೆ. ದೊಡ್ಡ ಜಾತಿಗಳ ಬಗ್ಗೆ ಸಮಾಜದಲ್ಲಿ ವೈಷಮ್ಯ ಮೂಡುವಂತದನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಈ ಕಾರಣದಿಂದ, ಅವರ ಪುಸ್ತಕವನ್ನು ನಮ್ಮ ಸರ್ಕಾರ ಮುಟ್ಟುಗೋಲು ಹಾಕಿದೆ. ಇದಕ್ಕೆ, ನನ್ನ ಎಲ್ಲಾ ಸಂಪುಟ ಸಹದ್ಯೋಗಿಗಳು ಒಕ್ಕೂರಲಿನಿಂದ ನಿರ್ಧಾರ ತೆಗೆದುಕೊಂಡಿದ್ದೇವೆ. ಇಡೀ ಕ್ಯಾಬಿನೆಟ್ ಸೇರಿ ಎಲ್ಲರೂ ಸಹಿ ಮಾಡಿದ್ದೇವೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಸಮಿತಿ ಕೂಡ ನನಗೆ ಪತ್ರ ಬರೆದಿತ್ತು. ಇದನ್ನು ನಾವು ಧೀರ್ಘವಾಗಿ ಚರ್ಚೆ ಮಾಡಿದ ಬಳಿಕ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡಿದ್ದೇವೆ. ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಈಗಾಗಲೇ ನಿರ್ದೇಶನವನ್ನೂ ಕೊಡಲಾಗಿದೆ. ಇದರ ಹಿಂದೆ ಯಾರ್ಯಾರು ಇದ್ದಾರೆ, ಅದನ್ನು ಸರ್ಕಾರ ಧಿಕ್ಕರಿಸಿ ಕ್ರಮಕೈಗೊಳ್ಳಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ಹೇಳಿದರು.
ಲೋಕರೂಢಿ ಮಾತನಾಡಬೇಕು ಅಲ್ವ? ಆಗಮಿಸಿರುವವರ ಜತೆ ಏನೇನು ವಿಚಾರ ಇದೆ ಮಾತನಾಡಬೇಕು. ನಿನ್ನೆ ಅವರಿಗೆಲ್ಲ ಆಹ್ವಾನ ಕೊಟ್ಟಿದ್ದೆ. 224 ಜನಕ್ಕೂ ನಾನು ಶಾಸಕ, ಒಬ್ಬರಿಗೆ ಸಿಎಂ ಅಲ್ಲ ನಾನು. ಕರೆ ನೀಡಿದ್ದೆ, ಎಲ್ಲರೂ ಬಂದಿದ್ದರು. ಎಲ್ಲರನ್ನೂ ಕರೆಯಲು ಸಾಧ್ಯವಾಗಲಿಲ್ಲ. ಸುಮಾರು 500ರಿಂದ 600 ಜನರನ್ನು ಕರೆದಿದ್ದೆ, ಅವರೆಲ್ಲರೂ ಬಂದಿದ್ದರು ಎಂದರು. ಇದೇ ಸಮಯದಲ್ಲಿ, ಜೆಡಿಎಸ್ ಹಿರಿಯೂರು ಟಿಕೆಟ್ ಕೊಡುವಂತೆ ಅಮಿತ್ ಶಾಗೆ ಬೇಡಿಕೆ ಇಟ್ಟಿರುವ ಬಗ್ಗೆ ಕೇಳಿದ್ದಕ್ಕೆ, ಬೇರೆ ಪಾರ್ಟಿ ವಿಚಾರ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ.