ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದ ಉದ್ಯಮಿ ಮೇಲೆ ಸ್ಥಳಿಯರ ಗುಂಪು ಹಲ್ಲೆ ಮಾಡಿದ್ದು, ನೈತಿಕ ಪೊಲೀಸ್ಗಿರಿ ಆರೋಪ ಕೇಳಿಬಂದಿದೆ.
ರಾಜಸ್ಥಾನ ಮೂಲದ ಉದ್ಯಮಿ ಅರವಿಂದ್ ಭಾರದ್ವಾಜ್ ಹಲ್ಲೆಗೆ ಒಳಗಾದವರು.
ಹಲ್ಲೆ ಮಾಡಿದ ಆರೋಪದ ಮೇಲೆ ಹರ್ಷ, ಭರತ್, ಸಂದೀಪ್, ತಿಮ್ಮರಾಜ್, ಅಭಿ ಹಾಗೂ ಲತಿಫ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಏನಿದು ಪ್ರಕರಣ? : ಅರವಿಂದ್ ಭಾರದ್ವಾಜ್ ಅವರು ಕಾರಿನಲ್ಲಿ ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದರು. ಇದಕ್ಕೆ ಸ್ಥಳಿಯರ ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವೇಳೆ ಅರವಿಂದ್ ಭಾರದ್ವಾಜ್ ಹಾಗೂ ಮಹಿಳೆ ಇಬ್ಬರೂ ತಮ್ಮ ಕಂಪನಿಯತ್ತ ತೆರಳುವಾಗ ಕಾರು ಸ್ಥಳಿಯರ ಬೈಕ್ಗೆ ಸ್ಪರ್ಶಿಸಿದೆ. ಇದರಿಂದ ಕೋಪಗೊಂಡ ಸ್ಥಳಿಯರ ಗುಂಪು ಕಂಪನಿವರೆಗೂ ಹಿಂಬಾಲಿಸಿಕೊಂಡು ಬಂದು, ಸಿಮೆಂಟ್ ಇಟ್ಟಿಗೆ ಎಸೆದು ಕಾರಿನ ಗಾಜು ಪುಡಿ ಮಾಡಿದ್ದಾರೆ. ಅಲ್ಲದೇ ಮಾರಕಾಸ್ತ್ರಗಳಿಂದ ಅರವಿಂದ್ ಭಾರದ್ವಾಜ ಮೇಲೆ ನಡೆಸಿದ್ದಾರೆ ಎನ್ನಲಾಗಿದೆ. ಅರವಿಂದ್ ಭಾರದ್ವಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.