ಅನ್ನದಾತನಿಗೆ ಬಂಪರ್ ಗಿಫ್ಟ್! ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು? Budget 2026-27

Budget 2026-27
Budget 2026-27
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ರಾಜ್ಯ ಬಜೆಟ್ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದೆ
  • ರೈತರ ಸಾಲ ಮನ್ನಾ, ನೀರಾವರಿ ಯೋಜನೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಬಂಪರ್ ಅನುದಾನ
  • ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆ ಎಂಬ ದೃಢ ನಂಬಿಕೆಯಿಂದ ಪ್ರೇರಿತ
  • ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು, ಉತ್ತಮ ಗುಣಮಟ್ಟದ ಕೃಷಿಪರಿಕರಗಳನ್ನು ಒದಗಿಸುವುದು
Budget 2026-27: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ರಾಜ್ಯ ಬಜೆಟ್ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದೆ. ರೈತರ ಸಾಲ ಮನ್ನಾ, ನೀರಾವರಿ ಯೋಜನೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಬಂಪರ್ ಅನುದಾನ ಘೋಷಿಸುವ ಮೂಲಕ 'ಅನ್ನದಾತ'ನ ಕೈಹಿಡಿಯುವ ಪ್ರಯತ್ನ ಮಾಡಲಾಗಿದೆ. ಹಾಗಿದ್ದರೆ, ಕೃಷಿ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಬಜೆಟ್​ನ ಪ್ರಮುಖ ಹೈಲೆಟ್ಸ್​ ಇಲ್ಲಿದೆ ನೋಡಿ..
* ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆ ಎಂಬ ದೃಢ ನಂಬಿಕೆಯಿಂದ ಪ್ರೇರಿತವಾಗಿ ನಮ್ಮ ಸರ್ಕಾರವು ಬಿತ್ತನೆಯಿಂದ ಮಾರಾಟದವರೆಗೆ, ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಆಧಾರಸ್ತಂಭಗಳ ಮೇಲೆ ಕೃಷಿ ಅಭಿವೃದ್ಧಿ ತಂತ್ರವನ್ನು ರೂಪಿಸಿದ್ದು, ಹಂತ ಹಂತವಾಗಿ ನೀಡಲಾಗಿದೆ.
ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು, ಉತ್ತಮ ಗುಣಮಟ್ಟದ ಕೃಷಿಪರಿಕರಗಳನ್ನು ಒದಗಿಸುವುದು ಮತ್ತು ಬೆಳೆಗಳ ನಿರ್ವಹಣೆ, ಕೊಯ್ಲೋತ್ತರ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ ನೀಡುವುದರಿಂದ ಪ್ರತಿಯೊಬ್ಬ ರೈತನು ಸಮೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸರ್ಕಾರ ದೃಢಸಂಕಲ್ಪ ಮಾಡಿದೆ.

ಕಳೆದ ಮೂರು ವರ್ಷಗಳಲ್ಲಿ ರೈತರ ಅಭ್ಯುದಯಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳು

1. 40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ
2. 2,825 ಕೋಟಿ ವೆಚ್ಚ ಭರಿಸಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ
3. 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ
4. 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ
5. 36 ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್ ಸಹಾಯಧನ
6. 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ
* ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ʻಮಿಲೆಟ್ ಹಬ್ʼ ಅನ್ನು ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸಲಾಗುವುದು.
* ರೈತರಿಗೆ ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶಗಳನ್ನು ಒದಗಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆದು ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಪರೀಕ್ಷಣಾ ಸೇವೆಗಳನ್ನು ಒದಗಿಸಲಾಗುವುದು.
* ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ರೈತರಲ್ಲಿ ಪ್ರೇರೇಪಿಸಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲಾಗುವುದು.
* ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತʼ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು.
* ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಇವುಗಳನ್ನು ನಿಯಂತ್ರಿಸಲು ಅಗತ್ಯವಿರುವ ಪರಿಸರ ಸ್ನೇಹಿ, ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳ ಶಿಫಾರಸ್ಸುಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
* ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ʻರೈತ ಕರೆ ಕೇಂದ್ರʼವನ್ನು AI ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು.
* ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼ ವನ್ನಾಗಿ ಉನ್ನತೀಕರಿಸಲಾಗುವುದು.
* ಕೃಷಿ ಚಟುವಟಿಕೆಯಲ್ಲಿ ರೈತರ ಸಮಯ ಹಾಗೂ ಶ್ರಮ ತಗ್ಗಿಸುವುದರೊಂದಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು.
* ಕೃಷಿ ಸಂಬಂಧಿತ ಕಸುಬುಗಳನ್ನು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು.
* ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
* ಹವಾಮಾನ ಬದಲಾವಣೆಗೆ ಹೊಂದಾಣಿಕೆ ಹಾಗೂ ತಗ್ಗಿಸುವಿಕೆಯ ರಾಜ್ಯದ ಪ್ರಯತ್ನಗಳನ್ನು ಬಲಪಡಿಸಿ ಕೃಷಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಲು ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವವಿಧಾನಗಳನ್ನು ಉತ್ತೇಜಿಸಲಾಗುವುದು.
* ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸುವುದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ MSIL ವತಿಯಿಂದ ರೈತ ಮಾಲ್ಗಳನ್ನು ಸ್ಥಾಪಿಸಲಾಗುವುದು.
* ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು.
* ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಅಥಣಿಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಒದಗಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net