ಪಾಲಿ ಭಾಷೆಯಲ್ಲಿ ಅಡಗಿದೆ ಭೌದ್ಧ ಸಾಹಿತ್ಯ

 ಕಲಬುರಗಿಯ ಪಾಲಿ ಇನ್ಸ್‌ಟಿಟ್ಯೂಟ್ ವತಿಯಿಂದ ಪ್ರಕಟಿಸಿರುವ ಪಾಲಿ-ಕನ್ನಡ ಶಬ್ದಕೋಶದ 5ನೇ ಸಂಪುಟವನ್ನು ನಗರದ ಶ್ರೀರಾಜೇಂದ್ರ ಭವನದಲ್ಲಿ ಗುರುವಾರ ಸಂಜೆ ಬಿಡುಗಡೆಗೊಳಿಸಲಾಯಿತು. ಡಾ.ಶಿವಾಜಿ ಜೋಯಿಸ್, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ರಾಹುಲ್ ಎಂ.ಖರ್ಗೆ,  ಡಾ.ವೂಡೇ ಪಿ.ಕೃಷ್ಣ, ಪ್ರೊ.ಎಸ್.ಶಿವರಾಜಪ್ಪ ಪಾಲ್ಗೊಂಡಿದ್ದರು
ಕಲಬುರಗಿಯ ಪಾಲಿ ಇನ್ಸ್‌ಟಿಟ್ಯೂಟ್ ವತಿಯಿಂದ ಪ್ರಕಟಿಸಿರುವ ಪಾಲಿ-ಕನ್ನಡ ಶಬ್ದಕೋಶದ 5ನೇ ಸಂಪುಟವನ್ನು ನಗರದ ಶ್ರೀರಾಜೇಂದ್ರ ಭವನದಲ್ಲಿ ಗುರುವಾರ ಸಂಜೆ ಬಿಡುಗಡೆಗೊಳಿಸಲಾಯಿತು. ಡಾ.ಶಿವಾಜಿ ಜೋಯಿಸ್, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ರಾಹುಲ್ ಎಂ.ಖರ್ಗೆ, ಡಾ.ವೂಡೇ ಪಿ.ಕೃಷ್ಣ, ಪ್ರೊ.ಎಸ್.ಶಿವರಾಜಪ್ಪ ಪಾಲ್ಗೊಂಡಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಶಿವಾಜಿ ಜೋಯಿಸ್ ವಿವರಣೆ
ಮೈಸೂರು: ಐತಿಹಾಸಿಕ ಹಿನ್ನೆಲೆ ಇರುವ ಭೌದ್ಧ ಸಾಹಿತ್ಯದ ತಳಗಟ್ಟು ಪಾಲಿ ಭಾಷೆಯ ಶಬ್ದಕೋಶದಲ್ಲಿ ಅಡಗಿದೆ ಎಂದು ಹಿರಿಯ ಪ್ರಾಧ್ಯಾಪಕ, ಬೌದ್ಧ ವಿದ್ವಾಂಸ ಡಾ.ಶಿವಾಜಿ ಜೋಯಿಸ್ ತಿಳಿಸಿದರು.
ಕಲಬುರಗಿಯ ಪಾಲಿ ಇನ್ಸ್‌ಟಿಟ್ಯೂಟ್ ವತಿಯಿಂದ ನಗರದ ಶ್ರೀರಾಜೇಂದ್ರ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪಾಲಿ-ಕನ್ನಡ ಶಬ್ದಕೋಶದ 5ನೇ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರಂಭಿಕ ಬೌದ್ಧ ಸಾಹಿತ್ಯವು ಮುಖ್ಯವಾಗಿ ಪಾಲಿ ಭಾಷೆಯಲ್ಲಿದ್ದು, ನಂತರದಲ್ಲಿ ಸಂಸ್ಕೃತ ಮತ್ತು ಇತರ ಏಷ್ಯನ್ ಭಾಷೆಗಳಲ್ಲಿ ಬೆಳೆಯಿತು. ಇವುಗಳನ್ನು ಬೌದ್ಧ ಧರ್ಮದ ಆಳವಾದ ಅಧ್ಯಯನಕ್ಕಾಗಿ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾಲಿ ಶಬ್ದಕೋಶದ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯ ಇದೆ ಎಂದರು.
ಬೌದ್ಧ ಸಾಹಿತ್ಯದ ಆರಂಭಿಕ ಕಾಲಘಟ್ಟದ ಕುರಿತು ಜಿಜ್ಞಾಸೆ ಇದೆ. ಜೈನ ಸಾಹಿತ್ಯಕ್ಕಿಂತ ಮೊದಲೇ ಬೌದ್ಧ ಸಾಹಿತ್ಯ ಇತ್ತು ಎಂಬ ಚರ್ಚೆಯೂ ಇದೆ. ಆದರೆ, ಈ ರೀತಿಯ ಚರ್ಚಾ ವಿಷಯಗಳು ಇತ್ಯರ್ಥವಾಗಿಲ್ಲ. ಆದ್ದರಿಂದ ಈ ಕುರಿತು ಸಂಶೋಧನೆ ಕೈಗೊಳ್ಳಬೇಕು. ಇತಿಹಾಸಿಕ ಆಕರ ಗ್ರಂಥಗಳನ್ನು ಇಟ್ಟುಕೊಂಡು ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಪಾಲಿ ಇನ್ಸ್‌ಟಿಟ್ಯೂಟ್ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
20ನೇ ಶತಮಾನದಲ್ಲಿ ಬಂದಿರುವ ಬೌದ್ಧ ಸಾಹಿತ್ಯದ ಕನ್ನಡ ಕೃತಿಗಳು ಮರು ಮುದ್ರಣವಾಗಬೇಕು. ಪಾಲಿ ಭಾಷೆಯಿಂದ ಕನ್ನಡಕ್ಕೆ  ತರ್ಜುಮೆಗೊಂಡಿರುವ ಕೃತಿಗಳ ಸಂಖ್ಯೆ ಬಹಳ ಕಡಿಮೆ. ಆದರೆ ಪಾಲಿಯಿಂದ ಇಂಗ್ಲಿಷ್‌ಗೆ, ಅಲ್ಲಿಯಿಂದ ಕನ್ನಡ ಬಂದಿರುವ ಕೃತಿಗಳು ಬಹಳಷ್ಟಿವೆ. ಹೀಗಾಗಿ ಪಾಲಿ ಭಾಷೆಯಲ್ಲಿರುವ ಕೃತಿಗಳನ್ನು ನೇರವಾಗಿ ಕನ್ನಡಕ್ಕೆ ಅನುವಾದಿಸುವ ಕೆಲಸವಾಗಬೇಕು ಎಂದರು.
ಪಾಲಿ ಇನ್ಸ್‌ಟಿಟ್ಯೂಟ್ ಗೌರವ ನಿರ್ದೇಶಕ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಪಾಲಿ, ಪ್ರಾಕೃತ ಭಾಷೆಗಳು ಮೊದಲು ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿತ್ತು. ಇದೀಗ ಈ ಭಾಷೆಯಡಿ ನಡೆಯುತ್ತಿದ್ದ ಸಂಶೋಧನೆಯೂ ತಪ್ಪಿ ಹೋಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪಾಲಿ, ಪ್ರಾಕೃತ, ಸಂಸ್ಕೃತ ಸಹೋದರ ಭಾಷೆಗಳು. ಕೆಲ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಭಾಷೆ ಕಲಿಸಲಾಗುತ್ತಿದೆ. ಬಹಳಷ್ಟು ವಿವಿಗಳಲ್ಲಿ ಇವುಗಳು ಮರೆಯಾಗಿವೆ ಎಂದು ಹೇಳಿದರು.
ಶಬ್ದಕೋಶ ಶಬ್ದಗಳ ಜೋಡಣೆಯಲ್ಲ ಅದು ಸಾಂಸ್ಕೃತಿಕ ಕೋಶ. ಶಬ್ದಗಳ ಪ್ರಯಣ, ಅವುಗಳ ಚರಿತ್ರೆ ತಿಳಿದುಕೊಳ್ಳಲು ಶಬ್ದಕೋಶ ಓದಬೇಕು ಎಂದು ತಿಳಿಸಿದರು.
2016ರಲ್ಲಿ ಪಾಲಿ-ಕನ್ನಡ ಶಬ್ದಕೋಶದ ಕೆಲಸ ಶುರುವಾಯಿತು. ಇದೀಗ 5ನೇ ಸಂಪುಟ ಬಿಡುಗಡೆಯಾಗಿವೆ. ಅ, ಆ, ಇ, ಈ, ಉ ವರೆಗಿನ ಶಬ್ದಗಳ ಕೋಶವನ್ನು ತಯಾರಿಸಿದ್ದು, ಇದೀಗ ‘ಊ’ ಪ್ರವೇಶವಾಗಿದ್ದು, ಮುಂದಿನ ದಿನಗಳಲ್ಲಿ ಶಬ್ದಕೋಶದ 20ಕ್ಕೂ ಹೆಚ್ಚು ಸಂಪುಟಗಳು ಬರಬೇಕಿದೆ. 
ಇದಕ್ಕಾಗಿ ಹೆಚ್ಚಿನ ಅಧ್ಯಯನ, ಸಂಶೋಧನೆ ಪ್ರಕ್ರಿಯೆಗಳು ದಾಟಿ ಏಕೀಕೃತ ಸಂಪುಟವನ್ನು ಕೊನೆಯಲ್ಲಿ ತರಲಾವುವುದು. ಇದಕ್ಕಾಗಿ ಬಹಳಷ್ಟು ವರ್ಷಗಳು ಹಿಡಿಯಲಿದೆ ಎಂದು ತಿಳಿಸಿದರು.
ಪಾಲಿ ಇನ್ಸ್‌ಟಿಟ್ಯೂಟ್ ಸಂಸ್ಥೆಯ ಅಧ್ಯಕ್ಷ ರಾಹುಲ್ ಎಂ.ಖರ್ಗೆ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಶಿವರಾಜಪ್ಪ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net