ಬೆಂಗಳೂರು: ಬಿಜೆಪಿಯ ನಾಯಕರು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ನರೇಗಾ ಬಚಾವ್ ಸಂಗ್ರಾಮ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾಥುರಾಂ ಗೋಡ್ಸೆ ಗಾಂಧೀಜಿಯನ್ನು ಕೊಲೆ ಮಾಡಿದರೆ ಬಿಜೆಪಿಯವರು ಅವರ ವಿಚಾರಧಾರೆಯನ್ನು ಕೊಲೆ ಮಾಡುತ್ತಿದ್ದಾರೆ ಎಂದರು.
ಗಾಂಧೀಜಿಯವರು ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ನರೇಗಾದಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ತೆಗೆದು ಸ್ವರೂಪ ಬದಲಾವಣೆ ಮಾಡಿರುವುದು ದುರಂತ. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ ಎಂದು ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ನಂಬಿಕೆ ಇಲ್ಲ. 20 ವರ್ಷಗಳ ಹಳೆಯ ಯೋಜನೆ ಆಗಿರುವ ಉದ್ಯೋಗ ಖಾತ್ರಿ ಸ್ವರೂಪವನ್ನು ಬದಲಿಸಿದ್ದಾರೆ. ಅದರಲ್ಲಿರುವ ದೋಷ ಸರಿಪಡಿಸಲು ಮಾಡಿದ್ದೆವೆ ಎಂದು ಹೇಳುತ್ತಿದ್ದಾರೆ.
12 ವರ್ಷಗಳಿಂದ ಇರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಆತ್ಮಕ್ಕೆ ಕೊಡಲಿಯೇಟು ನೀಡಿದೆ. ಬಿಜೆಪಿಯವರಿಗೆ ಗಾಂಧಿ ಪ್ರತಿಮೆ ಎದುರು ಕುಳಿತು ಹೋರಾಟ ಮಾಡುವ ನೈತಿಕತೆ ಇಲ್ಲ ಎಂದು ಸಲೀಂ ಅಹ್ಮದ್ ಕಿಡಿಕಾರಿದರು.