ನೈಸ್ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಿಎಂಗೆ ಬಿಜೆಪಿ ಮುಖಂಡ ಎಂ.ರುದ್ರೇಶ್ ಆಗ್ರಹ! M Rudresh

ನೈಸ್ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಿಎಂಗೆ ಬಿಜೆಪಿ ಮುಖಂಡ ಎಂ.ರುದ್ರೇಶ್ ಆಗ್ರಹ! M Rudresh
ನೈಸ್ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಿಎಂಗೆ ಬಿಜೆಪಿ ಮುಖಂಡ ಎಂ.ರುದ್ರೇಶ್ ಆಗ್ರಹ! M Rudresh
Published on

ಪ್ರಮುಖ ಮುಖ್ಯಾಂಶಗಳು

  • ನೈಸ್ ಯೋಜನಾ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸಿಎಂಗೆ ಬಿಜೆಪಿ ಮುಖಂಡ ರುದ್ರೇಶ್​ ಮನವಿ
  • ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ರೈತರು
  • 2003ರಲ್ಲಿ ಭೂಸ್ವಾಧೀನ ಮಾಡಿಕೊಂಡರೂ ಇದುವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದ ರುದ್ರೇಶ್​
  • ನೈಸ್ ಅಕ್ರಮಗಳ ವಿರುದ್ಧ ಜಯಚಂದ್ರ ಸದನ ಸಮಿತಿ ವರದಿ ಜಾರಿಗೆ ಆಗ್ರಹಿಸಿದ ಬಿಜೆಪಿ ಮುಖಂಡ
ಬೆಂಗಳೂರು: ನೈಸ್ ( NICE Project ) ರಸ್ತೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಈ ಯೋಜನೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಎಂ.ರುದ್ರೇಶ್ ( M Rudresh ) ಅವರ ನೇತೃತ್ವದಲ್ಲಿ ಸೋಂಪುರ ಸರ್ಕಲ್ ಭಾಗದ ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನ ಹಾಗೂ ಮುಖಂಡತ್ವದಲ್ಲಿ ಈ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ ಪ್ರಮುಖ ವಿಚಾರಗಳನ್ನು ಚರ್ಚಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂ.ರುದ್ರೇಶ್, ಸಿದ್ದಗಂಗಾ ಮಠಕ್ಕೆ ಸೇರಿದ 8 ಎಕರೆ ಜಾಗವೂ ಸೇರಿದಂತೆ ನೈಸ್ ಯೋಜನೆಗಾಗಿ 2003ರಲ್ಲೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಅಂದು ಕೇವಲ ಪ್ರತಿ ಎಕರೆಗೆ 5 ರಿಂದ 6 ಲಕ್ಷ ರೂಪಾಯಿಗಳಷ್ಟು ಅತ್ಯಲ್ಪ ಹಣವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಕೆಲ ರೈತರ ಒಟ್ಟು 2 ರಿಂದ 3 ಎಕರೆ ಜಾಗ ಪೂರ್ಣ ಪ್ರಮಾಣದಲ್ಲಿ ಭೂಸ್ವಾಧೀನವಾಗಿದ್ದರೂ ಇದುವರೆಗೆ ಅವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ರುದ್ರೇಶ್​ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಜಮೀನನ್ನು 2003ರಲ್ಲಿ ಸ್ವಾಧೀನಪಡಿಸಿಕೊಂಡು, ನಂತರ 2009ರಲ್ಲಿ ರಸ್ತೆ ನಿರ್ಮಿಸಲಾಗಿದೆ, ಆದರೆ ಅನೇಕರಿಗೆ ಇದುವರೆಗೆ ನ್ಯಾಯಯುತ ಹಣ ಸಿಕ್ಕಿಲ್ಲ. ಈ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ವರದಿ ಇದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಹೈಕೋರ್ಟ್ ಆದೇಶವಿರುವ ಬಗ್ಗೆಯೂ ಸಿಎಂ ಅವರ ಗಮನಕ್ಕೆ ತರಲಾಗಿದೆ ಎಂದು ರುದ್ರೇಶ್​ ಅವರು ತಿಳಿಸಿದ್ದಾರೆ.
ಇದೇ ವೇಳೆ, ಕುಮಾರಸ್ವಾಮಿ ಅವರು ಟೋಲ್ ಕಟ್ ಮಾಡಬೇಡಿ ಎಂದು ಹೇಳಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ. ಈ ಎಲ್ಲಾ ಗೊಂದಲಗಳು ಮತ್ತು ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ವಿವರಣೆ ನೀಡಲಾಗಿದ್ದು, ನೈಸ್ ಯೋಜನಾ ಸಂತ್ರಸ್ತ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ಮನವಿ ಮಾಡಿಕೊಂಡಿದೆ ಎಂದು ರುದ್ರೇಶ್​ ಅವರ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net