ಬೀದರ್ : ರಾಜ್ಯ ವನ್ನೇ ಬೆಚ್ಚಿಬೀಳಿಸಿದ್ದ ನಗರದಲ್ಲಿ ಎಸ್‌ಬಿಐ ಎಟಿಎಂ ದರೋಡೆ ಮತ್ತು ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಘಟನೆ ನಡೆದ ೧೯ ತಿಂಗಳ ನಂತರ ಪ್ರಮುಖ ಇಬ್ಬರು ಆರೋಪಿಗಳನ್ನು ಬುಧವಾರ ಬಿಹಾರದಲ್ಲಿ ಬಂಧಿಸಿದ್ದಾರೆ.
ಬಿಹಾರದ ವೈಶಾಲಿ ಜಿಲ್ಲೆ ದಾಮೋದರ ಗ್ರಾಮದ ಅಮನಕುಮಾರ ಸಿಂಗ್ ಮತ್ತು ಅಲೋಕಕುಮಾರ ಬಂಧಿತ ಹಂತಕರು. ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಖಾಕಿಪಡೆ ಕೂಬಿಂಗ್ ಕಾರ್ಯಾಚರಣೆ ಮೂಲಕ ಕೃತ್ಯ ಎಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದೆ.
ಅಂತಾರಾಜ್ಯ ಹಂತಕರಾಗಿರುವ ಈ ಇಬ್ಬರ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಕರಣಗಳಿದ್ದು, ಎರಡ್ಮೂರು ತಿಂಗಳಿಗೊಮ್ಮೆ ಗ್ರಾಮಕ್ಕೆ ಬರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಮನೆಯಿಂದ ಬೈಕ್‌ನಲ್ಲಿ ಹೊರಬರುತ್ತಿದ್ದಂತೆ ಕಾರಿನಲ್ಲಿದ್ದ ಪೊಲೀಸರ ತಂಡ ದಾಳಿ ನಡೆಸಿ ಇಬ್ಬರನ್ನೂ ಹಿಡಿದಿದೆ. ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಸನ್ನದಿ, ನಂದಗಾವೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಬಂಧಿತರನ್ನು ಇಂದು ರಾತ್ರಿ ನಗರಕ್ಕೆ ಕರೆತರಲಾಗುತ್ತಿದೆ.
ಶೂಟೌಟ್ ಪ್ರಕರಣ: ೨೦೨೫ರ ಜ.೧೬ರಂದು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರಲ್ಲೇ ಹಾಡಹಗಲೇ ಎಟಿಎಂ ವಾಹನಕ್ಕೆ ಹಣ ತುಂಬುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು ಸಿಎಂಎಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ೮೩ ಲಕ್ಷ ರೂ. ಇದ್ದ ಬಾಕ್ಸ್ ಲೂಟಿ ಮಾಡಿ ಪರಾರಿಯಾಗಿದ್ದರು. ಸಿಎಂಎಸ್ ಕ್ಯಾಶ್ ಕಸ್ಟೋಡಿಯನ್ ಗಿರಿ ವೆಂಕಟೇಶ್ ಸ್ಥಳದಲ್ಲೇ ಮÊತಪಟ್ಟಿದ್ದರೆ, ಶಿವಕುಮಾರ ಗುನ್ನಳ್ಳಿ ಗಂಭೀರ ಗಾಯಗೊಂಡಿದ್ದರು. ಈ ಕÊತ್ಯ ನಡೆದು ಒಂದೂವರೆ ವರ್ಷವಾದರೂ ದುಷ್ಕರ್ಮಿಗಳು ಪತ್ತೆಯಾಗದಿರುವುದು ಖಾಕಿಪಡೆಗೆ ತಲೆನೋವಾಗಿ ಪರಿಣಮಿಸಿತ್ತು.
ದುಷ್ಕರ್ಮಿಗಳ ಬಂಧನಕ್ಕಾಗಿ ಐಪಿಎಸ್ ಅಧಿಕಾರಿಗಳ ನೇತÊತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಕುರಿತು ಮಾಹಿತಿ ನೀಡಿದರೆ ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೋಧ ನಡೆಸಿ ಇಬ್ಬರು ದರೋಡೆಕೋರರ ಚಹರೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರೂ ಸಿಕ್ಕಿರಲಿಲ್ಲ. ಇಬ್ಬರ ಫೋಟೋಸಹಿತ `ವಾಂಟೆಡ್' ಪೋಸ್ಟರ್ ಅನ್ನು ಬಿಹಾರದ ಎಲ್ಲೆಡೆ ಅಂಟಿಸಿ ಬಂಧನಕ್ಕೆ ಜಾಲ ಬೀಸಲಾಗಿತ್ತು. ಆದರೆ ಪೊಲೀಸರ ಶ್ರಮಕ್ಕೆ ಫಲ ಸಿಕ್ಕಿರಲಿಲ್ಲ. ದರೋಡೆಕೋರರ ಇರುವಿಕೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದಾಗಲೆಲ್ಲ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ವಿಳಂಬವಾದರೂ ಈ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟಾಕಿ ಸಿಡಿಸಿ ಸಂಭ್ರಮ
ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಕೃತ್ಯ ನಡೆದಿದ್ದ ಎಸ್‌ಬಿಐ ಎದುರ ಜನರೊಂದಿಗೆ ಪೊಲೀಸರು ಸಂಭ್ರಮಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಜೈಘೋಷ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.