ಇನ್ನು ಪಾತ್ರೆಗಳನ್ನು ಸ್ವಚ್ಚ ಮಾಡಲು ಉಪಯೋಗಿಸುತ್ತಿದ್ದ ವಸ್ತುಗಳೂ ಪ್ಲಾಸ್ಟಿಕ್ ಬಾಟಲ್ ಅಥವಾ ಸ್ಯಾಚೆಗಳಲ್ಲಿರದೇ ಟ್ಯಾಬ್ಲೆಟ್ ರೂಪದಲ್ಲಿದ್ದವು. ಮದುವೆ ಪ್ರಕೃತಿಯ ಮಡಿಲಲ್ಲಿ ನಡೆದ ಕಾರಣ ಸ್ವಚ್ಚ ಗೊಳಿಸಿದ ನೀರು, ಸುತ್ತಲಿನ ಹಸಿರಿಗೆ ಹರಿಯುವ ವ್ಯವಸ್ಥೆಯಾಗಿತ್ತು. ಮದುಮಕ್ಕಳಿಗೆ ನೀಡಿದ ಪುಷ್ಪ ಗುಚ್ಛಗಳು ದೇವಸ್ಥಾನದ ಅಗರಬತ್ತಿ ತಯಾರಿಕಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆಯಾಗಿತ್ತು. ತಟ್ಟೆಯಲ್ಲಿ ಆಹಾರವನ್ನು ದಂಡಮಾಡದಂತೆ ವಿನಂತಿಸುವ ಫಲಕಗಳು ಊಟದ ಹಾಲಿನಲ್ಲಿ ಎದ್ದು ಕಾಣುತ್ತಿದ್ದವು. ಉಳಿದ ಆಹಾರ ತಕ್ಷಣವೇ ವಿತರಣೆಯಾಗುವ ವ್ಯವಸ್ಥೆಯನ್ನೂ ಆತ ಮಾಡಿಕೊಂಡಿದ್ದ. ಈ ರೀತಿಯ ವಿತರಣೆಗಾಗಿ ಸೂಕ್ತ ಜನರನ್ನು ಸಂಪರ್ಕಿಸಿದ್ದ. ಇದಲ್ಲವೇ ಮದುವೆಯ ವ್ಯವಸ್ಥೆಯೆನ್ನಿಸಿತ್ತು. ಮನೆಯಲ್ಲಿ ಕಾರ್ಯಕ್ರಮವೆಂದೊಡನೆ ಬಟ್ಟೆ, ಆಭರಣ, ಅಲಂಕಾರ, ಕಾರ್ಯ ಸಾಗಬೇಕಾದ ಪದ್ಧತಿ, ಅತಿಥಿಗಳ ಉಪಚಾರ, ಸತ್ಕಾರದ ವಿಷಯಗಳಲ್ಲೇ ಕಳೆದುಹೋಗುವ ನಾವು ಈ ರೀತಿಯಲ್ಲೂ ಯೋಚಿಸುವಂತಾದರೆ, ಭೂಮಿಗೆ ಅದೆಷ್ಟು ಹಗುರವಾದೇವು ಅನ್ನಿಸಿತ್ತು.