ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಈ ಪ್ರಯತ್ನ ಭಾರತದಲ್ಲಿಯೂ ನಡೆದಿದೆ. ಕರ್ನಾಟಕವೂ ಸೇರಿದಂತೆ ಗುಜರಾತ್, ರಾಜಸ್ಥಾನ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳನ್ನು ಹನಿ ನೀರ ಸಂಗ್ರಹಕ್ಕೆ ಸೂಕ್ತ ಜಾಗಗಳೆಂದು ಗುರುತಿಸಲಾಗಿದೆ. ಕರ್ನಾಟಕದ ಕರಾವಳಿಯ ಪ್ರದೇಶಗಳಾದ ಉಡುಪಿ, ಮಂಗಳೂರು, ಕಾರವಾರಗಳಂತೆ, ಪಶ್ಚಿಮ ಘಟ್ಟ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಮಳೆಯ ನಂತರದ ತಿಂಗಳುಗಳಲ್ಲಿ (ಸೆಪ್ಟೆoಬರ್–ಡಿಸೆoಬರ್) ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ರಾತ್ರಿಯ ತೇವಾಂಶ ಹೆಚ್ಚಾಗಿದ್ದು ಹನಿನೀರಿನ ಉತ್ಪಾದನೆ ಉತ್ತಮವೆನ್ನಲಾಗಿದೆ. ಮಳೆಯ ಅವಲಂಬನೆ ಇಲ್ಲದೇ, ಎಲ್ಲ ತರಹದ ಪ್ರದೇಶಗಳಲ್ಲೂ, ಕಡಿಮೆ ವೆಚ್ಚದಲ್ಲಿ ಸಾಮಾನ್ಯ ವಸ್ತುಗಳನ್ನು ಬಳಸಿ ಪರಿಸರ ಸ್ನೇಹಿ ಹಾಗೂ ಶುದ್ಧ ನೀರನ್ನು ನಾವು ಸಂಗ್ರಹಿಸಬಹುದು. ಅದರಲ್ಲೂ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಇದು ಪೂರಕ ನೀರು ಸಂಪನ್ಮೂಲ ಆಗಲಿದೆ. ನೈಸರ್ಗಿಕ ವಿಧಾನಗಳಿಂದ ನೀರು ಪಡೆಯುವ ಮಾನವ ಸಂಸ್ಕೃತಿಯ ಪರಂಪರೆಯನ್ನು ಹನಿನೀರು ಸಂಗ್ರಹಣೆ ಮತ್ತೊಮ್ಮೆ ನೆನಪಿಸುತ್ತದೆ. ಮನಸ್ಸು ನಮ್ಮದಾಗಬೇಕಷ್ಟೇ!