ನಿನ್ನಂತಹ ಸಾವಿರಾರು ಭರತ್ ರೆಡ್ಡಿಗಳು ಬಂದರೂ ನನ್ನ ಪತಿಯನ್ನು ಏನೂ ಮಾಡಲಾಗದು: ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಕಿಡಿ!

Aruna Lakshmi
Aruna Lakshmi
Published on
ಬಳ್ಳಾರಿ: "ನಿನ್ನ ವಯಸ್ಸಿನ ಎಷ್ಟೋ ನಾಯಕರನ್ನು ಜನಾರ್ದನ ರೆಡ್ಡಿ ಅವರು ಬೆಳೆಸಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ನೀನು ಶಾಸಕನಾಗಿದ್ದೀಯ ಅಷ್ಟೆ," ಎಂದು ಶಾಸಕ ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, "ನಿನ್ನಂತಹ ಸಾವಿರಾರು ಭರತ್ ರೆಡ್ಡಿಗಳು ಬಂದರೂ ನನ್ನ ಪತಿಯನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಸವಾಲು ಹಾಕಿದರು.
ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, "ಹಸಿವಿನ ಬೆಲೆ ಗೊತ್ತಿಲ್ಲದ ನೀನೊಬ್ಬ ಅಹಂಕಾರಿ. ನಿನ್ನ ತಂದೆ ದೇವರೆಡ್ಡಿ ಅವರಿಗೆ ಮೋಸ ಮಾಡಿ, ಮೂವರು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ಇಡೀ ಬಳ್ಳಾರಿಯನ್ನು ಮಟ್ಕಾ ಮತ್ತು ಜೂಜಾಟದ ಅಡ್ಡೆಯನ್ನಾಗಿ ಮಾಡಲು ನೀನು ಪಣ ತೊಟ್ಟಿದ್ದೀಯ. ಅಮಾಯಕರ ಶಾಪ ನಿನಗೆ ತಟ್ಟಿಯೇ ತೀರುತ್ತದೆ," ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ತಕ್ಷಣವೇ ಭರತ್ ರೆಡ್ಡಿಯನ್ನು ಬಂಧಿಸಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಿದ್ದರಾಮಯ್ಯ ಸರ್ಕಾರಕ್ಕೆ ರೆಡ್ಡಿ ಸವಾಲು

"ಕಾಂಗ್ರೆಸ್‌ನ ಕ್ರಿಮಿನಲ್‌ಗಳು ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿಟ್ಟರೂ ನನ್ನನ್ನು ಮುಗಿಸಲು ಸಾಧ್ಯವಾಗಲಿಲ್ಲ. ಈಗ ನನ್ನ ಮನೆ ಮೇಲೆ ದಾಳಿ ನಡೆಸಿ ಪ್ರಚೋದನೆ ನೀಡುತ್ತಿದ್ದಾರೆ," ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಗುಡುಗಿದ್ದಾರೆ.
ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ: ಶಾಸಕ ಭರತ್ ರೆಡ್ಡಿ ಅವರೊಂದಿಗೆ ಎಎಸ್‌ಪಿ ರವಿಕುಮಾರ್ ಮತ್ತು ಡಿವೈಎಸ್‌ಪಿ ನಂದಾರೆಡ್ಡಿ ಸೇರಿಕೊಂಡು ನನ್ನ ಮನೆಯ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದಾರೆ. ಈ ಅಧಿಕಾರಿಗಳು ಮತ್ತು ಶಾಸಕರು ಸೇರಿ ಬಳ್ಳಾರಿಯನ್ನು 'ಅನೈತಿಕ ಚಟುವಟಿಕೆಗಳ ಫ್ಯಾಕ್ಟರಿ' ಮಾಡಲು ಹೊರಟಿದ್ದಾರೆ ಎಂದು ರೆಡ್ಡಿ ಆರೋಪಿಸಿದರು. ಈ ಇಬ್ಬರೂ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಕ್ಕೆ ಎಚ್ಚರಿಕೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದು 'ರಿಪಬ್ಲಿಕ್ ಆಫ್ ಕರ್ನಾಟಕ'ದಂತಾಗಿದೆ. "ಸಿಎಂ ಸಿದ್ದರಾಮಯ್ಯ ಅವರೇ, ನೀವು ಕುರ್ಚಿಯಿಂದ ಇಳಿಯುವ ಮುನ್ನ ಭರತ್ ರೆಡ್ಡಿಯನ್ನು ಬಂಧಿಸಿ ನಿಮ್ಮ ಘನತೆ ಉಳಿಸಿಕೊಳ್ಳಿ," ಎಂದು ಸವಾಲು ಹಾಕಿದರು. ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಮತ್ತು ಶಾಸಕರನ್ನು ಬಂಧಿಸದಿದ್ದರೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net