ಕೆಡಿಪಿ ಬಹಿಷ್ಕರಿಸಿದ ಬಿ.ಜಿ.ಪಾಟೀಲ್ ಛಲವಾದಿ

 ಬಿ.ಜಿ.ಪಾಟೀಲ್
ಬಿ.ಜಿ.ಪಾಟೀಲ್
Published on

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿ ಗುರುಮಠಕಲ್ ಹುಣಸಗಿ ಸುರಪುರ ವಡಗೇರಾ ಬರ ಘೋಷಿಸದೆ ಸರ್ಕಾರದ ಅನ್ಯಾಯಕ್ಕೆ ಕಿಡಿ
  • ಶಾಸಕ ಶರಣಗೌಡ ಕಂದಕೂರ ನಿರ್ಧಾರಕ್ಕೆ ಬೆಂಬಲಿಸಿದ ಬಿಜೆಪಿ
ಯಾದಗಿರಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಯಾದಗಿರಿ, ಸುರಪುರ, ಗುರುಮಠಕಲï, ವಡಗೇರಾ, ಹುಣಸಗಿ ತಾಲೂಕುಗಳನ್ನು ಬರಪೀಡಿತ ಘೋಷಿಸದೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿರುವುದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಡಾ.ಬಿ.ಜಿ. ಪಾಟೀಲ್ ಮತ್ತು ಛಲವಾದಿ ನಾರಾಯಣಸ್ವಾಮಿ ಶುಕ್ರವಾರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಸಭೆಯನ್ನು ಬಹಿಷ್ಕರಿಸಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಜತೆ ಆಕ್ರೋಶ ಹೊರಹಾಕಿದರು.
ಎನ್‌ಡಿಎ ಮೈತ್ರಿಕೂಟದ ಗುರುಮಠಕಲï‌ನ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಕೆಪಿಡಿ ಸಭೆ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಶುಕ್ರವಾರ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯ ಡಾ.ಬಿ.ಜಿ.ಪಾಟೀಲ್ ಸಹ ಸಭೆಯಿಂದ ಹೊರಗುಳಿಯುವ ಮೂಲಕ ಸರ್ಕಾರದ ಜನ ಮತ್ತು ರೈತ ವಿರೋಧಿ ನಡೆಯನ್ನು ಖಂಡಿಸಿದರು.
ವಿಪಕ್ಷದವರಾಗಿ ಜನರ ಸಮಸ್ಯೆ, ಸಂಕಷ್ಟಗಳನ್ನು ಸರ್ಕಾರ ಮುಂದಿಡುವುದು ನಮ್ಮ ಹೊಣೆ. ಈಗಾಗಲೇ ಬಿಜೆಪಿ ಹೋರಾಟ ನಡೆಸಿ ಇಡೀ ಯಾದಗಿರಿ ಜಿಲ್ಲೆ ಬರಪೀಡಿತ ಘೋಷಿಸಲು ಒತ್ತಡ ಹೇರಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಜನರೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ಬಿ.ಜಿ.ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆ ಹಾನಿ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಬರ ಘೋಷಣೆಗೆ ಪೂರಕ ಅಂಶದ ವರದಿ ಸಲ್ಲಿಸಿದ್ದರೂ ಶಹಾಪುರ ಹೊರತುಪಡಿಸಿ ಉಳಿದ ತಾಲೂಕುಗಳನ್ನು ಸೇರಿಸದಿರುವುದಕ್ಕೆ ನಿಖರ ಕಾರಣ ನೀಡುತ್ತಿಲ್ಲ. ಇನ್ನು ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆಯಲ್ಲಿ ಬಲಿಯಾದವರ ಕುಟುಂಬಕ್ಕೆ ಇದುವರೆಗೆ ಪರಿಹಾರ ನೀಡಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಗರ್ಭಪಾತ ಪ್ರಕರಣವನ್ನು ಸರ್ಕಾರ ಗಂಭೀರ ಪರಿಗಣಿಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಬಡ ಹಾಗೂ ಸಣ್ಣ ರೈತರೇ ಹೆಚ್ಚಾಗಿದ್ದು, ಉಪಜೀವನಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಮಳೆಯಿಲ್ಲದೆ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲವೆಡೆ ಕಾನೂನುಬಾಹಿರ ಚಟುವಟಿಕೆ ನಡೆದಿದ್ದು, ಕಡಿವಾಣ ಹಾಕಬೇಕು. ಸರ್ಕಾರ ಕೂಡಲೇ ಯಾದಗಿರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ ಪರಿಹಾರ ಕಾರ್ಯ ಆರಂಭಿಸಬೇಕು. ಟಿಸಿ ಸುಟ್ಟರೆ ತಿಂಗಳುಗಟ್ಟಲೇ ಬದಲಾಯಿಸದೆ ರೈತರನ್ನು ಅಲೆದಾಡಿಸುತ್ತಿದ್ದು, ತಕ್ಷಣ ಸರಿಪಡಿಸಬೇಕು ಎಂದು ಬಿ.ಜಿ.ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.
"

ಯಾದಗಿರಿ ಜಿಲ್ಲೆಯ ಎಲ್ಲ ತಾಲೂಕು ಬರಪೀಡಿತ ಘೋಷಿಸಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು. ಮಳೆ ಇಲ್ಲದೆ ಅಂತರ್ಜಲ ಕುಸಿದಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಮತ್ತು ವೈದ್ಯರ ಕೊರತೆ ನಿವಾರಿಸಬೇಕು.| ಡಾ.ಬಿ.ಜಿ.ಪಾಟೀಲ್ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net