ಹಿಂಸಾತ್ಮಕ ಅಪರಾಧ ದೇಶಕ್ಕೆ ಬೆಂಗಳೂರು ತೃತೀಯ! 4 ವರ್ಷಗಳಿಂದ ಟಾಪ್ 3ನಲ್ಲಿ ರಾಜಧಾನಿ

ಮಾದಕ ವಸ್ತುಗಳ ಛಾಯಾಚಿತ್ರ
ಮಾದಕ ವಸ್ತುಗಳ ಛಾಯಾಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಒಂದೇ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಪ್ರಕರಣಗಳ ಏರಿಕೆ
  • ಮಾದಕ ವಸ್ತು ಬಳಕೆ, ಆರ್ಥಿಕ ಅಸಮಾನತೆ ಪ್ರಮುಖ ಕಾರಣ

ಬೆಂಗಳೂರು: ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್​ಅಪ್​ಗಳು ಹಾಗೂ ಜಾಗತಿಕ ಹೂಡಿಕೆಗಳ ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ, ಮತ್ತೊಂದೆಡೆ ಅಪರಾಧಗಳ ಏರಿಕೆಯಿಂದಲೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಸೈಬರ್ ಅಪರಾಧ ಪ್ರಕರಣಗಳಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಬೆಂಗಳೂರು, ಹಿಂಸಾತ್ಮಕ ಕ್ರೈಮ್​ ಪ್ರಕರಣಗಳಲ್ಲಿ 3ನೇ ಸ್ಥಾನದಲ್ಲಿದೆ.

ಹಿಂಸಾತ್ಮಕ ಅಪರಾಧಗಳ ವಿಭಾಗದಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆ, ಗಂಭೀರ ಹಲ್ಲೆ, ಮಹಿಳೆಯರ ಮೇಲಿನ ದೌರ್ಜನ್ಯ, ಗುಂಪು ಘರ್ಷಣೆ, ಅಪಹರಣ, ಗ್ಯಾಂಗ್ ಚಟುವಟಿಕೆಗಳು ಹಾಗೂ ಶಸ್ತ್ರಾಸ್ತ್ರ ಬಳಕೆ ಇತ್ಯಾದಿ ಸೇರಿವೆ. ಕಳೆದ 2023ರಲ್ಲಿ 3,528 ಪ್ರಕರಣಗಳು ವರದಿಯಾಗಿವೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 31,223 ಪ್ರಕರಣಗಳು ದಾಖಲಾತಿ ಅಂಕಿಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್​ಬಿ) ಬಿಡುಗಡೆ ಮಾಡಿದೆ. 2021ರಿಂದ 2024ರವರೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

2023ರಲ್ಲಿ 17,902 ಇದ್ದ ಅಪರಾಧಗಳ ಸಂಖ್ಯೆ ಒಂದೇ ವರ್ಷದಲ್ಲಿ 31,223ಕ್ಕೆ ಏರಿಕೆಯಾಗಿದೆ. ಆ ಪೈಕಿ ಶೇ.70 ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿವೆ. ವೇಗದ ನಗರೀಕರಣ, ಜನಸಂಖ್ಯೆಯ ಅತಿಯಾದ ಒತ್ತಡ, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಬಳಕೆ, ಆರ್ಥಿಕ ಅಸಮಾನತೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಹಿಂಸಾತ್ಮಕ ಘಟನೆಗಳ ಏರಿಕೆಗೆ ಪ್ರಮುಖ ಕಾರಣಗಳಾಗಿ ಪರಿಣಮಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಏರಿಕೆ

ಎನ್ಸಿಆರ್​ಬಿ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 2023ರಲ್ಲಿ 3,528 ಹಿಂಸಾತ್ಮಕ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಅದು 5,612ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ವರ್ಷದ ಅವಧಿಯಲ್ಲಿ 2,084 ಕೇಸ್ ಹೆಚ್ಚಳ ಕಂಡುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ನಗರದ ಹೊರವಲಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸ ಬಡಾವಣೆಗಳು, ರಾತ್ರಿ ವೇಳೆಯ ಚಟುವಟಿಕೆಗಳ ಹೆಚ್ಚಳ ಮತ್ತು ಅಕ್ರಮ ಚಟುವಟಿಕೆಗಳ ಜಾಲ ವಿಸ್ತರಣೆ ಅಪರಾಧ ನಿಯಂತ್ರಣಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಯಾವ ವರ್ಷದಲ್ಲಿ ಎಷ್ಟು ಪ್ರಕರಣ?

  • 2021 15,277
  • 2022 17,091
  • 2023 17,902
  • 2024 31,223

ರಾಜ್ಯದಲ್ಲೂ ಭಾರೀ ಏರಿಕೆ

ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತವೂ ಹಿಂಸಾತ್ಮಕ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 2024ರಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 31,223 ಹಿಂಸಾತ್ಮಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಹೋಲಿಸಿದರೆ 2023ರಲ್ಲಿ 17,902 ಕೇಸ್ ದಾಖಲಾಗಿದ್ದವು. ಒಂದು ವರ್ಷದಲ್ಲೇ ಸುಮಾರು 13 ಸಾವಿರಕ್ಕೂ ಹೆಚ್ಚು (ಶೇ.70) ಪ್ರಕರಣ ಏರಿಕೆಯಾಗಿವೆ.

ಡ್ರಗ್ಸ್ ಜಾಲದ ಪ್ರಭಾವ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್​ಗಳ ಚಟುವಟಿಕೆ ಹೆಚ್ಚಿರುವುದು ಹಲವು ತನಿಖೆಗಳಿಂದ ಬಹಿರಂಗವಾಗಿದೆ. ನೈಜೀರಿಯಾ, ಥಾಯ್ಲೆಂಡ್, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ ಮೂಲದ ಡ್ರಗ್ಸ್ ಜಾಲಗಳು ನಗರವನ್ನು ಪ್ರಮುಖ ಮಾರುಕಟ್ಟೆಯಾಗಿ ಬಳಸುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಮಾದಕ ವಸ್ತು ವ್ಯವಹಾರಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು, ರೌಡಿಗಳ ನಡುವಿನ ವೈಷಮ್ಯ ಮತ್ತು ಯುವಕರ ಗುಂಪು ಘರ್ಷಣೆಗಳು ಹಿಂಸಾತ್ಮಕ ಅಪರಾಧಗಳಿಗೆ ಕಾರಣವಾಗುತ್ತಿವೆ. ನಗರದಲ್ಲಿ ಸಾವಿ ರಾರು ಸಿಸಿ ಕ್ಯಾಮರಾಗಳು, ತಂತ್ರಜ್ಞಾನ ಆಧಾರಿತ ಪೆಟ್ರೋಲಿಂಗ್ ವ್ಯವಸ್ಥೆ ಹಾಗೂ ವಿಶೇಷ ಪೊಲೀಸ್ ತಂಡಗಳಿದ್ದರೂ ಅಪರಾಧಗಳು ಪ್ರಮಾಣ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.

4 ವರ್ಷಗಳಿಂದ ಟಾಪ್ 3ನಲ್ಲಿ ಬೆಂಗಳೂರು

2021ರಿಂದ 2024ರವರೆಗೆ ನಿರಂತರವಾಗಿ ಬೆಂಗಳೂರು ದೇಶದ ಹಿಂಸಾತ್ಮಕ ಅಪರಾಧ ಹೆಚ್ಚಿರುವ ಮಹಾನಗರಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳೊಳಗೆ ಮುಂದುವರಿದಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಉದ್ಯೋಗಕ್ಕಾಗಿ ವಿವಿಧ ರಾಜ್ಯಗಳಿಂದ ವಲಸೆ ಬರುತ್ತಿರುವ ಯುವಜನತೆ, ಅಕ್ರಮ ಡ್ರಗ್ಸ್ ಜಾಲ, ಪಬ್ ಮತ್ತು ನೈಟ್ಲೈಫ್ ಸಂಸ್ಕೃತಿ ವಿಸ್ತರಣೆ, ಸಾಮಾಜಿಕ ವೈಷಮ್ಯ ಹಾಗೂ ಆರ್ಥಿಕ ಒತ್ತಡಗಳು ಅಪರಾಧ ಏರಿಕೆಗೆ ಕಾರಣಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net