ಮಹಿಳೆಯರ ಸುರಕ್ಷತೆ ಬೆಂಗಳೂರು ಮೊದಲ ಸ್ಥಾನ

ದುಂಡು ಮೇಜಿನ ಸಮ್ಮೇಳ, ವರ್ಷದಲ್ಲಿ 20 ಸಾವಿರ ಪೊಲೀಸರಿಗೆ ತರಬೇತಿ
TMC
TMC
Published on: 

ಬೆಂಗಳೂರು: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ, ವಿಶ್ವದಲ್ಲಿ 17ನೇ ಸ್ಥಾನದಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ನಗರದ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕೇಂದ್ರದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಯು) ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ದುಂಡು ಮೇಜಿನ ಸಮ್ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ದೇಶ, ವಿದೇಶದಿಂದ ಉದ್ಯೋಗ ಅರಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಮಹಿಳೆಯರು ವಾಸವಾಗಿದ್ದಾರೆ. ತಡರಾತ್ರಿವರೆಗೆ ಕೆಲಸ ಮುಗಿಕೊಂಡು ವಿವಿಧ ಕಡೆ ಓಡಾಡುತ್ತಿದ್ದಾರೆ. ಯಾವುದೇ ಆತಂಕ, ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಎನ್‌ಜಿಒ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅವರದಿಯಲ್ಲಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬುದು ತಿಳಿದಿದೆ. ತುರ್ತು ಸಂದರ್ಭದಲ್ಲಿ 112 ಕರೆ ಮಾಡುವ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ತಲುಪಲು 14ರಿಂದ 15 ನಿಮಿಷ ಸಮಯ ಬೇಕಾಗಿತ್ತು. ಈಗ ಕರೆ ಬಂದ 6.30 ನಿಮಿಷದಲ್ಲಿ ಆ ಸ್ಥಳಕ್ಕೆ ತಲುಪುವ ವ್ಯವಸ್ಥೆ ಜಾರಿಯಲ್ಲಿದೆ. ತುರ್ತು ಕರೆಗೆ ಇತರೆ ಆ್ಯಪ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 20 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.

ಜರ್ಮನಿ ಪೊಲೀಸರ ತಂಡ ಭಾಗಿ:

ಬೆಂಗಳೂರಿನಲ್ಲಿ ನಡೆಯುತ್ತಿರುವ ಪೊಲೀಸ್ ತರಬೇತಿ ಸುಧಾರಣೆ ಕುರಿತು ತಿಳಿದುಕೊಳ್ಳಲು ದೇಶದ ವಿವಿಧ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ತರಬೇತಿಯಲ್ಲಿ ಲಿಂಗ ಸಮಾನತೆ ಜಾರಿಗೆ ತಂದಿರುವ ಸುಧಾರಣೆಗಳ ಕುರಿತು ಚರ್ಚಿಸಿದರು. ಈ ವೇಳೆ ಜರ್ಮನಿಯ ಬವೇರಿಯಾ ರಾಜ್ಯ ಪೊಲೀಸ್ ಅಧಿಕಾರಿಗಳ ನಿಯೋಗ ಕೂಡ ಪಾಲ್ಗೊಂಡಿತ್ತು.

ಸಮ್ಮೇಳ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲಿಂ ಮಾತನಾಡಿ, ಇಲಾಖೆಯಲ್ಲಿ ಲಿಂಗಸಂವೇದನಾಶೀಲತೆ ಬೆಳೆಸುವುದು, ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ತರಬೇತಿಯಲ್ಲಿ ಸಂಶೋಧನೆ ಮತ್ತು ಸಂಸ್ಥೆಗಳ ನಡುವಿನ ಸಹಯೋಗ ಬಲಪಡಿಸುವುದು ಅಗತ್ಯವಾಗಿದೆ ಎಂದರು.

ಇದೇ ವೇಳೆ ಎನ್‌ಎಲ್‌ಎಸ್‌ಐಯು ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆಯೊಂದಿಗಿನ ವಿಶ್ವವಿದ್ಯಾಲಯದ ಸಹಭಾಗಿತ್ವ ಹಾಗೂ 2021ರಿಂದ ಹಾನ್ಸ್ ಸೀಡಲ್ ಪ್ರತಿಷ್ಠಾನದೊಂದಿಗೆ ನಡೆಸುತ್ತಿರುವ ಸಹಯೋಗದ ಕಾರ್ಯವೈಖರಿ ಬಗ್ಗೆ ಸ್ಮರಿಸಿದರು.

ಈ ಸಂದರ್ಭದಲ್ಲಿ ಹಾನ್ಸ್ ಸೀಡಲ್ ಪ್ರತಿಷ್ಠಾನದ ಮುಖ್ಯಸ್ಥ ಜುಡಿತ್ ವೈನ್‌ಬರ್ಗರ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿ ಸೌಮೇಂದು ಮುಖರ್ಜಿ ಹಾಗೂ ತೆಲಂಗಾಣ, ಒಡಿಶಾ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net