2.5 ಲಕ್ಷ ರೂ. ಮೌಲ್ಯದ ಸಾಕು ಗಿಳಿ ರಕ್ಷಿಸಲು ಹೋದ ಬೆಂಗಳೂರು ಉದ್ಯಮಿ ವಿದ್ಯುತ್​ ಶಾಕ್​ಗೆ ಬಲಿ! Electrocution

ಗಿಳಿಯನ್ನು ರಕ್ಷಿಸಲು ಹೋದ ಬೆಂಗಳೂರು ಉದ್ಯಮಿ ಅರುಣ್​ ಕುಮಾರ್​ ಸಾವು
ಗಿಳಿಯನ್ನು ರಕ್ಷಿಸಲು ಹೋದ ಬೆಂಗಳೂರು ಉದ್ಯಮಿ ಅರುಣ್​ ಕುಮಾರ್​ ಸಾವು
Published on
ಬೆಂಗಳೂರು: ತಮ್ಮ ಸಾಕು ಗಿಳಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯುತ್​ ತಗುಲಿ ( Electrocution ) ಯುವ ಉದ್ಯಮಿಯೊಬ್ಬರು ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 
ಮೃತ ಉದ್ಯಮಿಯನ್ನು ಅರುಣ್​ ಕುಮಾರ್​ (32) ಎಂದು ಗುರುತಿಸಲಾಗಿದೆ. ತಮ್ಮ ಮಕಾವ್​ ಗಿಳಿಯನ್ನು ರಕ್ಷಿಸಲು ಪ್ರಯತ್ನಿಸುವಾಗ ಆಕಸ್ಮಿಕವಾಗಿ ಹೈವೋಲ್ಟೇಜ್​ ವಿದ್ಯುತ್​ ಲೈನ್​ ಸ್ಪರ್ಶಿಸಿ, ಮೃತಪಟ್ಟಿದ್ದಾರೆ. ಬೆಂಗಳೂರಿನ ಗಿರಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 
ಕುಮಾರ್ ಅವರ ಬಳಿ ಇದ್ದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಮಕಾವ್, ಶುಕ್ರವಾರ ಬೆಳಗ್ಗೆ ಮನೆಯಿಂದ ತಪ್ಪಿಸಿಕೊಂಡು ಹತ್ತಿರದ ವಿದ್ಯುತ್ ಕಂಬದ ಮೇಲೇರಿತು. ಬಳಿಕ ಕೈಯಲ್ಲಿ ಉಕ್ಕಿನ ಪೈಪ್ ಹಿಡಿದುಕೊಂಡು ಉದ್ಯಮಿ ಅರುಣ್ ಅವರು ತಮ್ಮ ಆವರಣದಲ್ಲಿರುವ ಗೋಡೆಯ ಮೇಲೆ ಹತ್ತಿದರು. ಗಿಳಿಯನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸುವಾಗ ಉಕ್ಕಿನ ಪೈಪ್ ಹೈ-ವೋಲ್ಟೇಜ್ ತಂತಿಗೆ ತಗುಲಿತು. ಇದರಿಂದ ಬಲವಾದ ವಿದ್ಯುತ್​ ಶಾಕ್​ಗೆ ಒಳಗಾದ ಅರುಣ್​, ಗೋಡೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.
ತಕ್ಷಣ ಅರುಣ್​ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರು ಅರುಣ್​ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ರಕ್ಷಣಾ ಕಾರ್ಯಾಚರಣೆಗೆ ಉಕ್ಕಿನ ಪೈಪ್​ ಬಳಸಿದ್ದೇ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 
ಅಂದಹಾಗೆ, ಅರುಣ್​ ಅವರು ವಾಹನ ನಂಬರ್ ಪ್ಲೇಟ್ ತಯಾರಿಸುವ ವ್ಯವಹಾರವನ್ನು ಮಾಡುತ್ತಿದ್ದರು. ಸದ್ಯ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net