

ಬೆಂಗಳೂರು: ರಾಜಧಾನಿಯಲ್ಲಿ ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ ಪ್ರಕರಣದಲ್ಲಿ ( Bengaluru Family Massacre ) ರಾಜಾಜಿನಗರ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮತ್ತೆರಡು ಮೃತದೇಹಗಳನ್ನು ಭಾನುವಾರ ಪತ್ತೆ ಮಾಡಿದ್ದಾರೆ.
ಚಾಮುಂಡೇಶ್ವರಿ ದೇಗುಲದಿಂದ 4 ಕಿ.ಮೀ. ದೂರದ ಹಳ್ಳದಲ್ಲಿ ಸೈಕೋ ಕಿಲ್ಲರ್ ಇಂದುಶೇಖರ್ನ ಬಾಮೈದ ಶಿವಕುಮಾರ್, ನಾದಿನಿ ದಿವ್ಯಾ ಮೃತದೇಹಗಳು ಸಿಕ್ಕಿವೆ. ಭಾನುವಾರ ಸಂಜೆ 4.30ರ ಸುಮಾರಿಗೆ ಇಂದುಶೇಖರ್ನನ್ನು ಸ್ಥಳಕ್ಕೆ ಕರೆತಂದ ಪೊಲೀಸರು, ಆತ ನೀಡಿದ ಮಾಹಿತಿ ಆಧರಿಸಿ ಪರಿಶೀಲಿಸಿದರು.
ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಮೊದಲಿಗೆ ದಿವ್ಯಾ ಮೃತದೇಹವನ್ನು ಹೊರತೆಗೆದರು. ಬಳಿಕ ಶಿವಕುಮಾರ್ ಮೃತದೇಹವನ್ನು ಬೆಟ್ಟದ ಕೆಳಭಾಗಕ್ಕೆ ಇಳಿದು ಶೋಧ ನಡೆಸಿ ಮೇಲೆಕ್ಕೆತ್ತಿ ತಂದರು. ಶವಗಳನ್ನು ಕೆಂಪು ಸೀರೆ ಮತ್ತು ಬೆಡ್ಶೀಟ್ನಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಇಂದುಶೇಖರ್ ತುಂಬಿದ್ದ. ಮೃತದೇಹಗಳ ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.
ಶನಿವಾರವಷ್ಟೇ ತಮಿಳುನಾಡಿನ ಸೇಲಂ ಘಾಟ್ನಲ್ಲಿ ಆರೋಪಿಯ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಮೃತದೇಹಗಳು ಪತ್ತೆಯಾಗಿದ್ದವು. ಪ್ರಕರಣದಲ್ಲಿ ಉಳಿದಿಬ್ಬರ ಶವಕ್ಕಾಗಿ ಶೋಧಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಬೆಂಗಳೂರಿನ ಎಸಿಪಿ ಪ್ರಭಾವತಿ ಪಾಂಡುರಂಗ, ಇನ್ಸ್ಪೆಕ್ಟರ್ ಶೇಖರ್, ಸಬ್ ಇನ್ಸ್ಪೆಕ್ಟರ್ ಅನಿತಾ ಲಕ್ಷ್ಮೀ, ಸಿಬ್ಬಂದಿಗಳೊಂದಿಗೆ ಮೈಸೂರಿನ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಧನರಾಜ್ ಇದ್ದರು.
ಆಸ್ತಿಗಾಗಿ ಪತ್ನಿ ಮತ್ತು ಅವರ ಕುಟುಂಬದ ಏಳು ಜನರನ್ನು ಕಗ್ಗೊಲೆ ಮಾಡಿದ್ದ ಇಂದುಶೇಖರ್ನ ಹಿರಿಯ ಸಹೋದರ ಬೆಳತ್ತೂರು ರಮೇಶ್ ಎಂಬಾತ ಬೇರೆ ಪ್ರಕರಣಗಳಲ್ಲಿ ಎರಡು ಮರ್ಡರ್ ಮಾಡಿ ಜೈಲು ಸೇರಿದ್ದ. 2024ರ ನವೆಂಬರ್ನಲ್ಲಿ ಆತ ಜೈಲಿನಲ್ಲಿ ಮರಣ ಹೊಂದಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಆವಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ರಮೇಶ್, 8 ವರ್ಷದ ಹಿಂದೆ ಬೆಳತ್ತೂರು ಸಮೀಪದ 1.8 ಎಕರೆ ಜಮೀನಿಗಾಗಿ ಇಬ್ಬರನ್ನು ಹತ್ಯೆಗೈದಿದ್ದ. ನಂಜಪ್ಪ ಎಂಬುವರು 15 ಕೋಟಿ ರೂ. ಮೌಲ್ಯದ ಕೃಷಿ ಜಮೀನು ಹೊಂದಿದ್ದರು. ವಯೋಸಹಜ ಕಾರಣದಿಂದ ನಂಜಪ್ಪ ಮೃತಪಟ್ಟ ನಂತರ ಅವರ ಆಸ್ತಿಯ ಮೇಲೆ ರಮೇಶ್ ಕಣ್ಣಿಟ್ಟಿದ್ದ. ಕೆಲ ದಿನದಲ್ಲಿ ವೆಂಕಟರಮಣ, ಸುಧಾರಾಣಿ ಎಂಬುವರನ್ನು ಕೊಲೆ ಮಾಡಿ ಜೈಲು ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಶುಕ್ರವಾರ (ನ.6) ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ಪತ್ತೆಯಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಆತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅಂದೇ ಬಾಲಕನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಸಿಕ್ಕಿರುವ ನಾಲ್ಕು ಮೃತದೇಹಗಳನ್ನು ಒಂದೇ ಕಡೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.