ಕಾವ್ಯ ಮೂಲಕವೇ ಸಾಕ್ಷಾತ್ಕಾರ ಪಡೆದವರು ಬೇಂದ್ರೆ-Bendre

ಡಾ.ಜಿ.ಬಿ. ಹರೀಶ
ಡಾ.ಜಿ.ಬಿ. ಹರೀಶ
Published on
ಬೆಂಗಳೂರು: ಕಾವ್ಯ ಜಗತ್ತಿನ ಮೂಲಕವೇ ಯೋಗಸಾಧನೆ ಮಾಡಿ ಸಾಕ್ಷಾತ್ಕಾರ ಪಡೆದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಎಂದು ಕಾದಂಬರಿಕಾರ ಡಾ.ಜಿ.ಬಿ. ಹರೀಶ ಹೇಳಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನಾಕುತಂತಿ ಷಷ್ಟಿಪೂರ್ತಿ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಣ್ಣ ಪ್ರಬಂಧ ಬರೆಯುವವರಿಗೂ ಜೀವನದ ಪಾಠ ಕಲಿಸಿಕೊಟ್ಟವರು. ಹರಿದ್ವಾರದಲ್ಲಿ ಪುಟ್ಟ ಹುಡುಗಿಯಿಂದಲೂ ಪಾಠ ಕಲಿತರು. ಬೇಂದ್ರೆಯವರು ಜಗತ್ತಿನ ಮೇಷ್ಟ್ರು, ಜೀವನದ ಮೇಷ್ಟ್ರು. ಅವರು ಮಾತು ನಿಷ್ಠುರವಾಗಿರುತ್ತಿತ್ತು. ಆದರೆ, ಮನಸ್ಸಿನಲ್ಲಿ ಕಹಿ ಉಳಿಸಿಕೊಂಡವರಲ್ಲ. ಜೀವಂತಿಕೆ ಎನ್ನುವುದು ಅವರ ಮುಖ್ಯಲಕ್ಷಣವಾಗಿತ್ತು ಎಂದರು.
ಬೇಂದ್ರೆಯವರ ಕಥೆಯನ್ನು ಹೇಳುವ ಅನೇಕರು ಆಯ್ದ ಘಟನೆಗಳನ್ನು ಮಾತ್ರ ಹೇಳುತ್ತಾರೆ. ಆದರೆ, ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕನ್ನಡ ಸಾಹಿತ್ಯ ವಿಮರ್ಶಕರು, ಇನ್ನೂ ಸಾಕಷ್ಟು ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇದ್ದಾಗಲೇ ಪೆವಿಲಿಯನ್‌ಗೆ ಕಳಿಸಿದ್ದರು. ಅವರ ಜೀವನವನ್ನು ನಾದ, ವೇದ, ಸಂಖ್ಯೆ ಎಂದು ನೋಡಬಹುದು. ಕಾವ್ಯ ಜಗತ್ತಿನ ಮೂಲಕವೇ ಯೋಗಸಾಧನೆ ಮಾಡಿ ಸಾಕ್ಷಾತ್ಕಾರ ಪಡೆದವರು ಬೇಂದ್ರೆ. ಒಟ್ಟಾರೆಯಾಗಿ ಹೃದಯ+ವಿವೇಕ= ಬೇಂದ್ರೆ ಕಾವ್ಯ ಎಂದು ಬಣ್ಣಿಸಿದರು.
ಹಿರಿಯ ಸಾಹಿತಿ ಡಾ. ನಾ. ಸೋಮೇಶ್ವರ, ಬೇಂದ್ರೆ ಕುರಿತು ರಸಪ್ರಶ್ನೆಯನ್ನು ಸಭಿಕರ ನಡುವೆ ನಡೆಸಿದ್ದು ಸ್ವಾರಸ್ಯಕರವಾಗಿತ್ತು. ಈ ನಡುವೆ ಮಾತನಾಡಿದ ಅವರು, ಜೀವನದಲ್ಲಿ ಬೆಂದರೆ ಬೇಂದ್ರೆ ಆಗುತ್ತಾರೆ ಎನ್ನುವ ಮಾತಿದೆ. ಅವರ ಜೀವನವನ್ನು ನೋಡಿದವರಿಗೆ ಈ ಮಾತು ಸತ್ಯವಾಗುತ್ತದೆ. ಅನೇಕ ಸಂಕಷ್ಟ ಅನುಭವಿಸಿದವರು ಬೇಂದ್ರೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಎಸ್. ನರೇಂದ್ರ ಕುಮಾರ್, ರಾಜ್ಯ ಸಹ ಖಜಾಂಚಿ ಭ.ರಾ. ವಿಜಯ್ ಕುಮಾರ್, ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ, ಕಲಾವಿದ ರಘುಮೂರ್ತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net