ಬಳ್ಳಾರಿ ಬ್ಯಾನರ್ ಘರ್ಷಣೆ: 25 ಆರೋಪಿಗಳಿಗೆ ಜಾಮೀನು ಮಂಜೂರು

Bellary banner clash
Bellary banner clash
Published on
ಬಳ್ಳಾರಿ: ನಗರದಲ್ಲಿ ಬ್ಯಾನರ್ ಹರಿದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದಿದ್ದ ಘರ್ಷಣೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣದಲ್ಲಿ ಜೈಲು ಸೇರಿದ್ದ 25 ಮಂದಿ ಆರೋಪಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ (ಜನವರಿ 9) ಜಾಮೀನು ನೀಡಿ ಆದೇಶ ಹೊರಡಿಸಿದೆ.
ಕೆಲವು ದಿನಗಳ ಹಿಂದೆ ಬಳ್ಳಾರಿ ನಗರದ ಪ್ರಮುಖ ವೃತ್ತವೊಂದರಲ್ಲಿ ಅಳವಡಿಸಲಾಗಿದ್ದ ರಾಜಕೀಯ ಮತ್ತು ಧಾರ್ಮಿಕ(ವಾಲ್ಮೀಕಿ ಪುತ್ಥಳಿ ಪ್ರತಿಷ್ಟಾಪನೆ) ಭಾವಚಿತ್ರಗಳಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಈ ವಿಷಯವು ಎರಡು ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿ, ನಂತರ ಕಲ್ಲು ತೂರಾಟ ಮತ್ತು ಹಿಂಸಾಚಾರಕ್ಕೆ ತಿರುಗಿತ್ತು.ಇನ್ನು ಗಲಭೆಯಲ್ಲಿ ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್​ ಎಂಬುವರು ಮೃತಪಟ್ಟಿದ್ದರು.
ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸಾರ್ವಜನಿಕ ಶಾಂತಿ ಭಂಗ ಮತ್ತು ಆಸ್ತಿ ಹಾನಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 25ಕ್ಕೂ ಹೆಚ್ಚು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ನ್ಯಾಯಾಲಯದ ಆದೇಶ..

ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಕೆಲವು ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದೆ.ಆರೋಪಿಗಳು ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸಬಾರದು ಮತ್ತು ಮುಂದಿನ ಆದೇಶದವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕೆಂದು ನ್ಯಾಯಾಧೀಶರು ಷರತ್ತುಗಳು ವಿಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net