2 ಕಂಟೇನರ್​, 400 ಕೋಟಿ ರೂ.! ಪ್ರಕರಣದ ಇಂಚಿಂಚೂ ಮಾಹಿತಿ ಹಂಚಿಕೊಂಡ ಬೆಳಗಾವಿ ಎಸ್​ಪಿ ಕೆ.ರಾಮರಾಜನ್

ಬೆಳಗಾವಿ 400 ಕೋಟಿ ರೂ. ದರೋಡೆ ಪ್ರಕರಣ
ಬೆಳಗಾವಿ 400 ಕೋಟಿ ರೂ. ದರೋಡೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ದೇಶದ ಅತಿದೊಡ್ಡ ದರೋಡೆ ಕೇಸ್​ ಬೆಳಕಿಗೆ
  • 2 ಕಂಟೇನರ್​ನಲ್ಲಿ 400 ಕೋಟಿ ರೂ. ಹಣ ಅಕ್ರಮ ಸಾಗಾಟ
  • ಕಳೆದ ವರ್ಷ ಅಕ್ಟೋಬರ್​ 16ರಂದು ನಡೆದಿರುವ ಪ್ರಕರಣ
  • ಕೇಸ್​ನ ಇಂಚಿಂಚೂ ಮಾಹಿತಿ ಹಂಚಿಕೊಂಡ ಬೆಳಗಾವಿ ಎಸ್​ಪಿ
ಬೆಳಗಾವಿ: ಎರಡು ಕಂಟೇನರ್​ನಲ್ಲಿ ಅಕ್ರಮವಾಗಿ 400 ಕೋಟಿ ರೂ. ಸಾಗಿಸಿದ ಪ್ರಕರಣವೊಂದು ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ನಡೆದಿರುವ ದೇಶದ ಅತಿದೊಡ್ಡ ದರೋಡೆ ಕೇಸ್​ ಎನ್ನಲಾಗಿದೆ. ಸದ್ಯ ಈ ಕೇಸ್​ ಬೆನ್ನತ್ತಿರುವ ಖಾಕಿ ಪಡೆಗೆ ಇದೆಲ್ಲಿಂದ ಆರಂಭವಾಯಿತು? ಯಾವಾಗ ಸಂಭವಿಸಿತು? ಎಂಬ ಸಂಪೂರ್ಣ ಚಿತ್ರಣ ಈಗಾಗಲೇ ಲಭಿಸಿದೆ. ಈ ಮಧ್ಯೆ, ಬೆಳಗಾವಿಯ ಎಸ್​ಪಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಬೆಳಗಾವಿ ಎಸ್ಪಿ ಕಚೇರಿಗೆ ಜ.6ರಂದು ಮಹಾರಾಷ್ಟ್ರದ ನಾಸಿಕ ಜಿಲ್ಲಾ ವರಿಷ್ಠಾಧಿಕಾರಿ ಪತ್ರ ಬರೆದಿದ್ದಾರೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚೋರ್ಲಾ ಘಾಟ್​ ಬಳಿ ಒಂದು 400 ಕೋಟಿ ರೂಪಾಯಿ ರಾಬರಿ ಆಗಿರುವ ಮಾಹಿತಿ ನಮಗೆ ಲಭಿಸಿತು. ಕೇಸ್​ ಬಗ್ಗೆ ಸಂದೀಪ್​ ಪಾಟೀಲ ಎಂಬುವವರು ನಾಶಿಕ್ ಪೊಲೀಸರಿಗೆ ದೂರು ನೀಡುವ ಮೂಲಕ ಘಟನೆಯನ್ನು ಬೆಳಕಿಗೆ ತಂದಿದ್ದಾರೆ" ಎಂದರು.

ಅಕ್ಟೋಬರ್ 22ರಂದು ಕಿಡ್ನ್ಯಾಪ್​

"ಕಳೆದ ವರ್ಷ ಅಕ್ಟೋಬರ್ 22ರಂದು ವಿಶಾಲ ನಾಯ್ಡು ಎನ್ನುವ ವ್ಯಕ್ತಿ ತನ್ನನ್ನು ಕಿಡ್ನಾಪ್ ಮಾಡಿದ ಬಗ್ಗೆ ಸಂದೀಪ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿರಾಟ ಗಾಂಧಿ ಎಂಬಾತನ ಸೂಚನೆಯ ಮೇರೆಗೆ ಸಂದೀಪ್​ ಪಾಟೀಲ್​ರನ್ನು ಕರೆದಿರುತ್ತಾರೆ. ಈ ವೇಳೆ ವಿಶಾಲ್ ಮತ್ತು ಆತನ ಸಹಚರರು ತಮ್ಮ ಪಾರ್ಚೂನರ್ ಕಾರಿನಲ್ಲಿ ಪಾಟೀಲ್​ರನ್ನು ಅಪಹರಿಸಿದ್ದರು. ಆ ನಂತರ ಕಂಟೇನರ್​ ಕಳ್ಳತನ ಆರೋಪವನ್ನು ಹೊತ್ತುಕೊಳ್ಳುವಂತೆ ಒತ್ತಾಯಿಸಿದ್ದಾರೆ" ಎಂದರು.
"ಕಂಟೇನರ್ ಕಳ್ಳತನ ಒಪ್ಪಿಕೊಳ್ಳುವಂತೆ ಹಲ್ಲೆಗೈದಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೊರ ಬಂದಿರುವ ಸಂದೀಪ್​, ನೇರವಾಗಿ ನಾಶಿಕ್ ಪೊಲೀಸರಿಗೆ ದೂರು ಸಲ್ಲಿಸಿದ. ಕಿಡ್ನ್ಯಾಪ್​ ಮಾಡಿದಾಗ ಈ 400 ಕೋಟಿ ರೂ. ರಾಬರಿ ಮಾಡಿರುವುದು ಪ್ರಸ್ತಾಪ‌ ಮಾಡಿದ್ದರಂತೆ. ಇದೇ ವಿಷಯವನ್ನು ಸಂದೀಪ್​, ನಾಶಿಕ್ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ‌ ಬಗ್ಗೆ ನಮಗೂ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ" ಎಂದು ಹೇಳಿದರು.

ಐ ವಿಟ್ನೆಸ್

"ಸದ್ಯದ ಬೆಳವಣಿಗೆಯಲ್ಲಿ ದರೋಡೆ ಕೇಸ್​ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದೆ. ಇದಕ್ಕೆ ತಂಡ ರಚನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಮಗೆ ಬಂಧಿತರ ವಿಚಾರಣೆಗೆ ಅವಕಾಶ ಸಿಕ್ಕಿಲ್ಲ. ಈ ಕುರಿತಂತೆ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ಸಹಕಾರ ಕೊಡಲಿಕೆ ನಾವು ರೆಡಿ ಇದ್ದೇವೆ ಎಂದು ಪತ್ರ ಬರೆದಿದ್ದೇನೆ. ಭಾರತೀಯ ಸಾಕ್ಷಿ ಅಧಿನಿಯಮ ಐ ವಿಟ್ನೆಸ್ (ನೋಡಿರುವವರು) ಬಂದ್ರೆ ಕೇಸ್ ದಾಖಲು ಮಾಡಿಕೊಳ್ಳುತ್ತೇವೆ. ಪ್ರಸ್ತುತ, ಈ ಕೇಸಲ್ಲಿ 198 ಬಿಎನ್ಎಸ್ಎಸ್ ದಾಖಲಾಗಿದೆ" ಎಂದು ಹೇಳಿದರು.

ಹಳೆ ನೋಟುಗಳು?

"ಸದ್ಯದ ಮಟ್ಟಿಗೆ ಮೂರು ರಾಜ್ಯಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ನಡೀತಿದೆ. ನಮ್ಮಲ್ಲಿ ಕೇಸ್ ಆಗಿರುವುದರಿಂದ ನಾವು ವಿಚಾರಣೆ ಮಾಡಲು ಸಿದ್ದರಿದ್ದೇವೆ. ಈ ಹಣ ಎಲ್ಲಿಂದ ಬಂತು? ಎಲ್ಲಿಗೆ ತಲುಪಲು ಹೊರಟ್ಟಿತ್ತು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. 400 ಕೋಟಿ ರೂ. ಹಳೇ ನೋಟುಗಳು ಎಂದು ನಾಶಿಕ್​ ಪೊಲೀಸರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎಷ್ಟು ಮುಖ ಬೆಲೆಯ ಕರೆನ್ಸಿ ಎಂಬುದಿನ್ನು ಖಚಿತವಾಗಿಲ್ಲ. ಈ ಬಗ್ಗೆ ನಾವೂ ಸಮಗ್ರವಾಗಿ ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net