ಪಟ್ಟಣದ ಶ್ರೀ ಸೋಮಶೇಖರಮಠದಲ್ಲಿ ಲಿಂ.ಬಸವಲಿಂಗ ಸ್ವಾಮೀಜಿ 70ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜ.7 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಜ.7ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಮೂರುಸಾವಿರಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ. ಜ.8ರಂದು ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ ಅವರಿಂದ ಪ್ರವಚನ, ಶ್ರೀ ರೇಣುಕಾ ಯಲ್ಲಮ್ಮದೇವಿಯ 125 ಜೋಗತಿಯರಿಗೆ ಸಾಮೂಹಿಕ ಪಡ್ಡಲಗಿ ತುಂಬುವುದು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸತೆ ಡಾ.ಬಿ.ಮಂಜಮ್ಮ ಜೋಗತಿ ಅವರಿಗೆ ಪ್ರಸಕ್ತ ಸಾಲಿನ "ಮುರುಶ್ರೀ ಪ್ರಶಸ್ತಿ' ಪ್ರದಾನ ಮಾಡಲಾಗುವುದು.
ಜ.9ರಂದು ಪ್ರವಚನ, ಜ.10ರಂದು ಪ್ರವಚನ ಮಂಗಲೋತ್ಸವ ಹಾಗೂ ಜ.11ರಂದು ಲಿಂ.ಸ್ವಾಮೀಜಿ ಪುಣ್ಯಸ್ಮರಣೋತ್ಸವ, ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣ ಗ್ರಂಥ ಬಿಡುಗಡೆ, ವಿವಿಧ ಪೂಜ್ಯರು, ಗಣ್ಯರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮುನವಳ್ಳಿಯ ಸೋಮಶೇಖರ ಶ್ರೀಮಠ ಕೇವಲ ಅಧ್ಯಾತ್ಮಕ್ಕಷ್ಟೇ ಸೀಮಿತವಾಗದೆ ಶಿಕ್ಷಣಕ್ಕೂ ಅಪಾರ ಕೊಡುಗೆ ನೀಡಿದೆ. "ಮುನಿಗಳ ಹಳ್ಳಿ ಮುನವಳ್ಳಿ' ಆಗಿದೆ. ಹೆಸರೇ ಸೂಚಿಸುವಂತೆ ಇದು ಅನೇಕ ಮುನಿಗಳು, ಸಾಧು ಸತ್ಪುರುಷರ ನೆಲೆಯಾಗಿರುವ ಪುಣ್ಯಭೂಮಿ. ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಾಚಿನ ಪರಂಪರೆ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾಗಿರುವ ಶ್ರೀ ಸೋಮಶೇಖರ ಮಠ ಸಹಸ್ರಾರು ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಮಠದ 16ನೇ ಪೀಠಾಧಿಪತಿ ಮುರುಂದ್ರ ಸ್ವಾಮೀಜಿ ಸಮಾಜಮುಖಿ ಕಾರ್ಯ, ಅವಿರತ ಶ್ರಮ ಹಾಗೂ ಭಕ್ತರ ಸಹಕಾರದ ಲವಾಗಿ ಶ್ರೀಮಠ ಹೆಮ್ಮರವಾಗಿ ಬೆಳೆದಿದೆ.