ಶಿಡ್ಲಘಟ್ಟ ಪೌರಾಯುಕ್ತೆಗೆ ಬಾಯಿಗೆ ಬಂದಂತೆ ಬೈದಿದ್ದ ರಾಜೀವ್ ಗೌಡರನ್ನು ಪಕ್ಷದಿಂದ ಸಸ್ಪೆಂಡ್​ ಮಾಡಿದ ಕಾಂ​ಗ್ರೆಸ್​! Banner Row

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಗೆ ಅಶ್ಲೀಲ ಪದ ಬಳಕೆ
  • ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಆರೋಪ
  • ರಾಜ್ಯದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪಕ್ಷದಿಂದಲೇ ರಾಜೀವ್​ ಗೌಡನನ್ನು ಸಸ್ಪೆಂಡ್​ ಮಾಡಿದ ಕಾಂಗ್ರೆಸ್​
ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ( Banner Row ) ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪ ಹೊತ್ತು ಭಾರೀ ಟೀಕೆಗೆ ಗುರಿಯಾಗಿರುವ ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್ ಗೌಡರನ್ನು ಕಾಂಗ್ರೆಸ್​ ಪಕ್ಷದಿಂದ ಅಮಾನತು ಮಾಡಲಾಗಿದೆ.
ರಾಜೀವ್​ ಗೌಡ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾದ ಕೆ. ರೆಹಮಾನ್​ ಕ್ರಮ ಕೈಗೊಂಡಿದ್ದಾರೆ. ಕೆಪಿಸಿಸಿ ಕಳುಹಿಸಿದ ಪತ್ರದ ಅನುಸಾರ ದಿನಾಂಕ 23-01-2026 ರಂದು ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಸಭೆಯಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಕೇಳಿಬಂದಿರುವ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ಘಟನೆ?

ವಸತಿ ಸಚಿವ ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ ನಟನೆಯ ಕಲ್ಟ್​ ಸಿನಿಮಾ ಇಂದು ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ, ಕಲ್ಟ್​ ಸಿನಿಮಾದ ಪೋಸ್ಟರ್​ಗಳನ್ನು ಶಿಡ್ಲಘಟ್ಟದಲ್ಲಿ ಅಳವಡಿಸಲಾಗಿತ್ತು. ಈ ವೇಳೆ ಪೋಸ್ಟರ್​ಗಳನ್ನು ತೆರವು ಮಾಡಲಾಗಿತ್ತು. ಇದರಿಂದ ಕೆರಳಿದ ರಾಜೀವ್ ಗೌಡ, ಪೋನ್ ಮಾಡಿ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದರು. ರಾಜೀವ್​ ಗೌಡ ಆಡಿದ ಕೊಳಕು ಮಾತುಗಳಿಂದ ಬೇಸತ್ತಿರುವ ಅಮೃತಾ ಅವರು ಕಣ್ಣೀರಿಟ್ಟಿದ್ದರು.

ಫೋನ್​ ಸಂಭಾಷಣೆಯಲ್ಲಿ ಏನಿದೆ?

ಕರೆ ಮಾಡಿದ ರಾಜೀವ್​ ಗೌಡ, ಮೇಡಂ ನೀವು ಬ್ಯಾನರ್​ ಬಿಚ್ಚೋಕೆ ಹೇಳಿದ್ರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ ಅಮೃತಾ, ಇಲ್ಲ ಸರ್​ ಒಂದು ಬ್ಯಾನರ್​ ಮಾತ್ರ ರಸ್ತೆಯ ಮಧ್ಯದಲ್ಲಿ ಹಾಕಿದ್ದರಂತೆ, ಅದು ವಾಹನಗಳಿಗೆ ಅಡ್ಡಿಯಾಗುತ್ತಿತ್ತಂತೆ. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಇತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರು ಅಂತ ನಾನು ಪಕ್ಕದಲ್ಲಿ ಬ್ಯಾನರ್​ ಕಟ್ಟಿಕೊಳ್ಳಲು ಸೂಚನೆ ನೀಡಿದ್ದೆ ಎಂದು ಅಮೃತಾ ಹೇಳುತ್ತಾರೆ. ಇದಕ್ಕೆ ಏರು ಧ್ವನಿಯಲ್ಲಿ ಮಾತನಾಡುವ ರಾಜೀವ್​, ಬ್ಯಾನರ್ ಬಿಚ್ಚಿದ್ದೀರಿ ಅಂತಾ ಏನಾದರೂ ಗೊತ್ತಾದ್ರೆ, ಬಂದು ಬೆಂಕಿ ಹಚ್ಚಿಸುತ್ತೇನೆ. ನೀವು ನನ್ನ ಒಳ್ಳೆಯತನ ನೋಡಿದ್ದೀರಿ ಆದರೆ, ಕೆಟ್ಟತನ ನೋಡಿಲ್ಲ ಎಂದು ಕಿಡಿಕಾರಿದರು.
ದೂರು ಬಂದರೆ ಅದು ಹೇಗೆ ಬ್ಯಾನರ್​ ಕಿತ್ತುಹಾಕುತ್ತೀರಿ ಎನ್ನುತ್ತಲೇ ರಾಜೀವ್​ ಅವರು ತೀರಾ ಅಶ್ಲೀಲ ಪದಗಳನ್ನು ಬಳಸಿದರು. ಬ್ಯಾನರ್​ ಕಟ್ಟಿರುವುದೇ ಅಕ್ರಮ ಮತ್ತು ಅದನ್ನು ಸೈಂಟಿಫಿಕ್​ ಆಗಿ ಕಟ್ಟಿಲ್ಲ. ಇದರಿಂದ ಅಪಘಾತವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ ಎಂದು ಅಮೃತಾ ಅವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದಾಗ, ರಾಜೀವ್​ ಅವರು ಮಾತು ನಿಲ್ಲಿಸದೇ, ಅಶ್ಲೀಲ ಬೈಗುಳಗಳನ್ನು ಮುಂದುವರಿಸುತ್ತಾರೆ. ಕಳೆದ ಬಾರಿಯೂ ಇದೇ ರೀತಿ ಬ್ಯಾನರ್​ಗಳನ್ನು ತೆಗೆಸಿಹಾಕಿ, ಶಾಸಕರ ಬ್ಯಾನರ್​ ಹಾಕಿಸಿದ್ದೀರಿ ಎನ್ನುತ್ತಾ ಸ್ಥಳೀಯ ಶಾಸಕ ಬಿ.ಎನ್​. ರವಿಕುಮಾರ್​ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದರು. ಅಲ್ಲದೆ, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ. ಸಿ.ಸುಧಾಕರ್​ಗೂ ನಿಂದನೆ ಮಾಡಿದರು.

ರಾಜೀವ್​ ವಿರುದ್ಧ ಭಾರೀ ಆಕ್ರೋಶ

ಇದಿಷ್ಟೇ ಅಲ್ಲದೆ, ಜನರನ್ನು ದಂಗೆ ಏಳಿಸ್ತೀನಿ, ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಮತ್ತು ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದರು. ಯಾವಾಗ ಆಡಿಯೋ ವೈರಲ್​ ಆಯಿತೋ ರಾಜೀವ್​ ಗೌಡ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಕೂಗು ಎಲ್ಲೆಡೆ ಕೇಳಿಬಂತು. ಬಳಿಕ ರಾಜೀವ್​ ವಿರುದ್ಧ ಪ್ರಕರಣ ಸಹ ದಾಖಲಾಯಿತು. ಬಂಧನಕ್ಕೆ ಒತ್ತಾಯಿಸಲಾಯಿತು. ಆದರೆ, ರಾಜೀವ್ ಬಂಧನದಿಂದ ತಪ್ಪಿಸಿಕೊಳ್ಳಲು​ ನಿರೀಕ್ಷಣಾ ಜಾಮೀನು ಮೊರೆ ಹೋದರು. ಆದರೆ, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಇದೀಗ ಕಾಂಗ್ರೆಸ್​ ಪಕ್ಷ ರಾಜೀವ್​ ಅವರನ್ನು ಅಮಾನತು ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net