ಬೆಂ.ವಿವಿ ಕುಲಪತಿ ಹುದ್ದೆ: ಡಾ. ರೆಡ್ಡಿ ವಿರುದ್ಧ ಆಕ್ಷೇಪಿಸಿ ರಾಜ್ಯಪಾಲರಿಗೆ ಪತ್ರ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ಕುಲಪತಿ ಪ್ರೊ. ಎಚ್.ಸಿ. ಬೋರಲಿಂಗಯ್ಯ ನೇತೃತ್ವದ ಶೋಧನಾ ಸಮಿತಿಯು ಬೆಂವಿವಿಯ ಕುಲಪತಿ ಹುದ್ದೆಗೆ ಪ್ರೊ. ಸಿ. ಶಿವರಾಜು, ಪ್ರೊ. ಸಿ. ಶ್ರೀನಿವಾಸ್ ಮತ್ತು ಡಾ. ಜಗನ್ನಾಥ ರೆಡ್ಡಿ ಎಚ್.ಎನ್. ಅವರ ಹೆಸರನ್ನು ಶಿಫಾರಸು
  • ಡಾ. ಜಗನ್ನಾಥ ರೆಡ್ಡಿ ಅವರು ಖಾಸಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿ ಕುಲಪತಿಯಾಗಲು ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಇರಬೇಕು ಎಂಬ ಅರ್ಹತೆ ಪಾಲನೆಯಾಗಿಲ್ಲ ಆರೋಪ
  • ಸರ್ಕಾರಕ್ಕೆ ಸಲ್ಲಿಸಿರುವ ಕಿರುಪಟ್ಟಿಯನ್ನು ರದ್ದು ಪಡಿಸಿ ಅರ್ಹತಾ ಮಾನದಂಡಗಳ ಅನುಸಾರ ಪಾರದರ್ಶಕವಾಗಿ ಮರು ಪರಿಶೀಲನೆ ನಡೆಸಬೇಕು
  • ಅರ್ಹತಾ ಮಾನದಂಡವನ್ನು ಪೂರೈಸದ ವ್ಯಕ್ತಿಗಳನ್ನು ಕಿರುಪಟ್ಟಿಯಿಂದ ಹೊರಗಿಡಬೇಕು ಎಂದು ಆಗ್ರಹ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶೋಧನಾ ಸಮಿತಿ ತಯಾರಿಸಿರುವ ಕಿರುಪಟ್ಟಿ (ಶಾರ್ಟ್ ಲಿಸ್ಟ್) ಇದೀಗ ವಿವಾದಕ್ಕೆ ಗುರಿಯಾಗಿದೆ. ಕಿರುಪಟ್ಟಿಗೆ ಅರ್ಹತಾ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಕುಲಾಧಿಪತಿಗಳಾಗಿರುವ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಪ್ರಸಕ್ತ ವಿವಿಯ ಕುಲಪತಿಯಾಗಿರುವ ಡಾ. ಎಸ್.ಎಂ. ಜಯಕರ ಅವರ ಅಧಿಕಾರ ಅವಧಿ ಜು.10ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಸಿ. ಬೋರಲಿಂಗಯ್ಯ ನೇತೃತ್ವದ ಶೋಧನಾ ಸಮಿತಿಯು ಬೆಂವಿವಿಯ ಕುಲಪತಿ ಹುದ್ದೆಗೆ ಪ್ರೊ. ಸಿ. ಶಿವರಾಜು, ಪ್ರೊ. ಸಿ. ಶ್ರೀನಿವಾಸ್ ಮತ್ತು ಡಾ. ಜಗನ್ನಾಥ ರೆಡ್ಡಿ ಎಚ್.ಎನ್. ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಡಾ. ಜಗನ್ನಾಥ ರೆಡ್ಡಿ ಅವರು ಖಾಸಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ವಿವಿ ಕುಲಪತಿಯಾಗಲು ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಇರಬೇಕು ಎಂಬ ಅರ್ಹತೆ ಪಾಲನೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಅರ್ಹತಾ ಮಾನದಂಡಗಳನ್ನು ಗಾಳಿಗೆ ತೂರಿ ಈ ಆಯ್ಕೆ ಮಾಡಲಾಗಿದೆ. ಆದ್ದರಿಂದ, ಸರ್ಕಾರಕ್ಕೆ ಸಲ್ಲಿಸಿರುವ ಕಿರುಪಟ್ಟಿಯನ್ನು ರದ್ದು ಪಡಿಸಿ ಅರ್ಹತಾ ಮಾನದಂಡಗಳ ಅನುಸಾರ ಪಾರದರ್ಶಕವಾಗಿ ಮರು ಪರಿಶೀಲನೆ ನಡೆಸಬೇಕು. ಅರ್ಹತಾ ಮಾನದಂಡವನ್ನು ಪೂರೈಸದ ವ್ಯಕ್ತಿಗಳನ್ನು ಕಿರುಪಟ್ಟಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂಗೆ ಪತ್ರ ಬರೆದ ವಕೀಲ

ಇನ್ನು ಮಬುಸುಭಾನ್ ಸಾಬ್ ಎಂಬ ವಕೀಲ ಮುಖ್ಯಮಂತ್ರಿಗೆ ಪತ್ರ ಬರೆದು ಜಗನ್ನಾಥ ರೆಡ್ಡಿ ಅವರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಾ. ರೆಡ್ಡಿ ಅವರು 2016ರಲ್ಲಿ ವಿಟಿಯು ಕುಲಸಚಿವರಾಗಿದ್ದ ವೇಳೆ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ್ದರು. ಅಲ್ಲದೆ, ವಿಶ್ವವಿದ್ಯಾಲಯದ ಹಣವನ್ನು ತಮ್ಮ ವೈಯಕ್ತಿಕ ಕಾನೂನು ಹೋರಾಟಗಳಿಗೆ (ಸುಮಾರು 30 ಲಕ್ಷ ರೂ.) ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಅವರ ಮೇಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net